

ವಿಜಯವಾಣಿ ಸುದ್ದಿಜಾಲ, ತುಮಕೂರು ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರ ಕುರಿತ ‘ಸವ್ಯಸಾಚಿ’ ಗೌರವ ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟವು ಏ.10ರಂದು ನಗರದ ಹೊರವಲಯದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ವಾರಣಾಸಿಯ ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ಸಿರಿ ಕಾರ್ಯಕ್ರಮ ಉದ್ಘಾಟಿಸುವರು. ಪದ್ಮಶ್ರೀ ಡಾ.ಚಂದ್ರಶೇಖರ ಕಂಬಾರ ಸವ್ಯಸಾಚಿ ಗೌರವ ಗ್ರಂಥ ಬಿಡುಗಡೆ ಮಾಡುವರು. ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ದಿಕ್ಸೂಚಿ ಭಾಷಣ ಮಾಡುವರು. ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾರುತಿ ಡಿ. ಮಾಲೆ, ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರ ಉಪಸ್ಥಿತರಿರುವರು ಎಂದು ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಅಧ್ಯಕ್ಷ ಡಾ.ಎಂ.ಝಡ್.ಕುರಿಯನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 5 ಸಾವಿರ ಆಸನ: ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ ಕಾರ್ಯಕ್ರಮ ಆಯೋಜಿಸಿದ್ದು, ಬೃಹತ್ ಸಭಾಂಗಣ ನಿರ್ಮಿಸಲಾಗಿದೆ. ಒಟ್ಟು 5 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ವೇದಿಕೆಗಳನ್ನು ನಿರ್ಮಿಸಿದ್ದು, ಒಂದು ವೇದಿಕೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದರೆ ಮತ್ತೊಂದು ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವರಿಗೆ ಡಾ.ಎಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಉಪಾಧ್ಯಕ್ಷ ಡಾ.ಪ್ರಭಾಕರ್ ತಿಳಿಸಿದರು. ಶ್ರೀಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಾಳಿತಾಧಿಕಾರಿ ನಂಜುಂಡಪ್ಪ, ಶ್ರೀಸಿದ್ಧಾರ್ಥ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಕುಡುವ, ಶ್ರೀಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ಕುಮಾರ್, ಸಾಹೇ ವಿಶ್ವವಿದ್ಯಾನಿಲಯ ಕುಲಾಧಿಪತಿ ಸಲಹೆಗಾರರಾದ ವಿವೇಕ್ ವೀರಯ್ಯ ಹಾಜರಿದ್ದರು.
ಪರಮೇಶ್ವರ ಕುರಿತ ಸವ್ಯಸಾಚಿ ಗ್ರಂಥ ಸವ್ಯಸಾಚಿ ಗೌರವ ಗ್ರಂಥದಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಹತ್ತಿರದಿಂದ ಬಲ್ಲ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರು ಸೇರಿ ಹಲವು ಗಣ್ಯರು ಜಾತ್ಯತೀತವಾಗಿ, ಪಕ್ಷಾತೀತವಾಗಿ ಬರೆದಿರುವ ಲೇಖನಗಳು ಗ್ರಂಥದಲ್ಲಿವೆ. ಗ್ರಂಥವು 476 ಪುಟಗಳಿದ್ದು, ನಾಲ್ಕು ಭಾಗಗಳಿವೆ ಎಂದು ಗ್ರಂಥದ ಸಂಪಾದಕ ಪ್ರೊ.ಮಾದೇವ್ ಭರಣಿ ತಿಳಿಸಿದರು.
ಸ್ವರ ಮಾಧುರ್ಯ ಗೀತಗಾಯನ ‘ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯರವರ ಕುರಿತು ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಜನಕಥಾ ಕೀರ್ತನವನ್ನು ಏ.9 ರಂದು ಸಂಜೆ 6.30 ರಿಂದ 10.30 ರವರೆಗೆ ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ 101 ಜಾನಪದ ಗಾಯಕ ವೃಂದದೊಂದಿಗೆ ಪ್ರಸಿದ್ಧ ಗಾಯಕ ಕೆಂಕೆರೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಾನಪದ ಝೇಂಕಾರ ನಡೆಯಲಿದೆ. ಏ.10 ರಂದು ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಹಾಗೂ ಮತ್ತು ಬಳಗದಿಂದ ಬೆಳಗ್ಗೆ 8.30 ರಿಂದ 10.30 ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.