ಹೆಣ್ಣೆಂಬ ಕಾರಣಕ್ಕೆ ಗರ್ಭಪಾತ: ದಿನೇಶ್ ಗುಂಡೂರಾವ್ ಬೇಸರ

minister dinesh gundu rao
Published on

ಬೆಂಗಳೂರು: ಹೆಣ್ಣು ಮಗು ಬೇಡ ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸಿಕೊಳ್ಳುತ್ತಿರುವುದು ಶೋಚನಿಯ ಸಂಗತಿ. ಹೆಣ್ಣು ಮಕ್ಕಳ ಜೀವ ರಕ್ಷಣೆಗೆ ಸುಕನ್ಯಾ ಸಮೃದ್ಧಿ ಯೋಜನೆ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಗಾಂಧಿನಗರ ಕ್ಷೇತ್ರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಪಾಸ್ ಬುಕ್ ಬಾಂಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ ಯೋಜನೆಯಡಿ ಸರ್ಕಾರ, ಪ್ರತಿ ವರ್ಷ ಹಣ ಭರಿಸಿ 18 ವರ್ಷ ತುಂಬಿದ ನಂತರ ಮೊದಲ ಮಗುವಿಗೆ 1.28 ಲಕ್ಷ ರೂ. ಮತ್ತು 2ನೇ ಹೆಣ್ಣು ಮಗುವಿಗೆ 1.18 ಲಕ್ಷ ರೂ. ನೀಡುತ್ತದೆ. ಹೆಣ್ಣು ಹುಟ್ಟಿದರೆ ಋಷಿ ಪಡಬೇಕು. ಎಲ್ಲ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಆಟೋದಿಂದ ಹಿಡಿದು ವಿಮಾನವನ್ನು ಚಾಲನೆ ಮಾಡುತ್ತಿದ್ದಾರೆ ಎಂದರು.

ನಮ್ಮ ಸರ್ಕಾರ ಮಹಿಳೆಯರ ಪರ ಇದೆ. ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 30 ಸಾವಿರ ಕೋಟಿ ರೂ. ನೀಡಲಾಗಿದೆ. ಶಕ್ತಿ ಯೋಜನೆಯಿಂದ ಪ್ರತಿ ಮಹಿಳೆಯರಿಗೆ ತಿಂಗಳಿಗೆ 3 ಸಾವಿರ ರೂ. ಉಳಿತಾಯವಾಗುತ್ತಿದೆ. ಹಾಗಾಗಿ, ಐದು ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. 10 ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಕಲಿಕೆಗಾಗಿ ಸ್ಮಾರ್ಟ್ ಟಿವಿ ವಿತರಿಸಲಾಗುತ್ತಿದೆ. ಮಕ್ಕಳ ಕಲಿಕೆ ಮತ್ತು ಆರೋಗ್ಯ ಉತ್ತಮವಾಗಿರಬೇಕು. ಅಗ ಸಶಕ್ತ ದೇಶ ಕಟ್ಟಲು ಸಾಧ್ಯ. ಆರ್. ಗುಂಡೂರಾವ್ ಫೌಂಡೇಷನ್‌ನಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಸಿಡಿಪಿಒ ಅಧಿಕಾರಿಗಳಾದ ಸಿದ್ದಲಿಂಗಪ್ಪ, ಅಶೋಕ್, ಗಾಂಧಿನಗರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮೇಶ್ ಬಾಬು ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net