ಆತಂಕದಲ್ಲಿ ಭಾರತದ ಮೂಲನಿವಾಸಿಗಳು

27
Published on

ಮೈಸೂರು: ಸ್ವಾತಂತ್ರೃದ ಉದ್ದೇಶ ಬುಡಮೇಲು ಮಾಡಲಾಗುತ್ತಿದ್ದು, ಭಾರತದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ.ಮಲ್ಲೇಶ್- 90ರ ಅಂಗವಾಗಿ ಶನಿವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಪಂಚಕ್ಕೆ ಶಾಂತಿ, ಅಹಿಂಸೆ, ಸಹಿಷ್ಣುತೆಯನ್ನು ಬೋಧನೆ ಮಾಡಿದ ರಾಷ್ಟ್ರ ಭಾರತ. ಅಹಿಂಸೆ ಹಾಗೂ ಅಸಹಕಾರದಿಂದ ಸ್ವಾತಂತ್ರ್ಯ ಪಡೆದ ಈ ದೇಶದ ಇಂದಿನ ಆಡಳಿತ ವ್ಯವಸ್ಥೆಯು ಎಲ್ಲರನ್ನೂ ತಳಮಳಗೊಳಿಸುತ್ತಿದೆ. ದೇಶದ ಉಜ್ವಲ ಭವಿಷ್ಯಕ್ಕೆ ಮಾರ್ಗ ತೊರಿಸುವ ಸಂವಿಧಾನ ಇಂದು ಅಪಾಯದಲ್ಲಿದೆ. ಜನರ ಜೀವನ ನಿಜಕ್ಕೂ ಕಷ್ಟದಲ್ಲಿದೆ. ಅಸ್ಪೃಶ್ಯತೆ ನಿವಾರಣೆ ಆಗಿಲ್ಲ. ಕೋಮ ಸೌಹಾರ್ದತೆ ಸಂಪೂರ್ಣ ಸಾಧಿಸಿಲ್ಲ. ನಮ್ಮ ದೇಶದ ಮೂಲ ಕಸುಬಾದ ಕೃಷಿ ಆಧಾರಿತ ಬದುಕು ಸಂಕಷ್ಟಕ್ಕೆ ಸಿಲುಕಿದ. ರೈತರು ಕೃಷಿ ನಿಲ್ಲಿಸಿ ಬೀದಿಗಿಳಿದು ಹೋರಾಟ ಮಾಡಬೇಕಾದ ಹೀನಾಯ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದರು.

ನೆಹರು ಅವರು ಪ್ರಧಾನಿಯಾಗಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯ ಈಡೇರಿಸಲು ಪಂಚವಾರ್ಷಿಕ ಯೋಜನೆ ಮುಖಾಂತರ ದೇಶವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುವಂತಹ ಪ್ರಯತ್ನ ನಡೆದು ದೇಶದಲ್ಲಿ ಕೃಷಿಯ ಉತ್ಪಾದನೆಗೆ ಪ್ರೇರಕ ಶಕ್ತಿಯಾದ ಬಾಕ್ರಾನಂಗಲ್ ಅಣೆಕಟ್ಟೆ ನಿರ್ಮಾಣ ಮಾಡಲಾಯಿತು ಎಂದು ವಿವರಿಸಿದರು.

ಭೂಮಿ ಸಾಮಾನ್ಯ ಜನರಿಗೆ, ಕೃಷಿಕರಿಗೆ ಸಾಮಾಜಿಕ ಭದ್ರತೆ ಒದಗಿಸುತ್ತದೆ. ಆದರೆ ಇಂದು ಭೂಮಿಯು ಬಂಡವಾಳಶಾಹಿಗಳ ಕೈಸೇರುತ್ತಿದೆ. ಒಬ್ಬ ವ್ಯಕ್ತಿ ನೂರಾರು ಎಕರೆ ಹೊಂದುವಂಥ ಕರಾಳ ಶಾಸನವನ್ನು ಬಿಜೆಪಿ ಸರ್ಕಾರ ಜಾರಿ ಮಾಡಿದೆ. ಇದರಿಂದ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಂಧೂ ನಾಗರಿಕತೆ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಚರಿತ್ರೆ, ನಮ್ಮ ಸಾಂಸ್ಕೃತಿಕ ಬದುಕು, ಧಾರ್ಮಿಕ ಆಚಾರ, ವಿಚಾರ, ವಿಭಿನ್ನವಾದ ಪ್ರಾಂತ್ಯಗಳ ಜನಜೀವನ ಹಾಗೂ ಸ್ವತಃ ನೋವನ್ನು ಅನುಭವಿಸಿ, 15 ಕ್ಕೂ ಹೆಚ್ಚು ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಬಾಬಾ ಸಾಹೇಬರು ಭಾರತದ ಸಂವಿಧಾನ ರಚಿಸಿದ್ದಾರೆ. ಸಮಾನತೆ, ಸಮಾನ ಅವಕಾಶ, ಸಂಪತ್ತಿನ ಹಂಚಿಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಂಚುವುದು ಸೇರಿದಂತೆ ಸಂವಿಧಾನದ ನೀತಿ, ನಿರ್ದೇಶನಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಹೇಳಿದರು.
ಪ್ರಪಂಚದ ಇತಿಹಾಸದಲ್ಲಿ ಚಳವಳಿಗಳು ಜನಜೀವನದಲ್ಲಿ ಅಮೂಲಾಗ್ರವಾದ ಬದಲಾವಣೆ ತಂದಿವೆ. ಆದರೆ ಇಂದು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ಬಲಪಡಿಸುವಂತಹ ಚಳವಳಿಗಳು ಕ್ಷೀಣಿಸುತ್ತಿದೆ. ಅಧ್ಯಯನಶೀಲತೆ ಕಡಿಮೆಯಾಗುತ್ತಿದೆ. ಎಂಬತ್ತನೇ ದಶಕದ ಹೋರಾಟ, ಜೆಪಿ ಅವರ ಸಮಗ್ರ ಕ್ರಾಂತಿ, ನಂಜುಂಡಸ್ವಾಮಿ ಅವರ ಭಾರತ ಚಳವಳಿ, ದಲಿತ ಸಂಘಟನೆಗಳ ಶಾಂತಿಯುವಾದ ಹೋರಾಟಗಳು, ಅನ್ಯಾಯದ ವಿರುದ್ಧದ ಧ್ವನಿ ಕವಲಾಗಿ ಒಡೆದು ಹೋಗುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು.

ಸರ್ವಾಧಿಕಾರ ಎಂದಿಗೂ ಉಳಿಯುವುದಿಲ್ಲ:

ಪ್ರಸ್ತುತ ನಮ್ಮೆಲ್ಲರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿದೆ. ಇದರ ಕತ್ತು ಹಿಚುಕಿದರೆ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಲಿದೆ. ವ್ಯಕ್ತಿಪೂಜೆ ಸರ್ವಾಧಿಕಾರಕ್ಕೆ ಪ್ರೇರಣವಾಗಲಿದೆ. ಸರ್ವಾಧಿಕಾರಿಯು ಪ್ರಜಾಪ್ರಭುತ್ವ ನಾಶ ಮಾಡುತ್ತಾನೆ. ಇದರಿಂದ ದೇಶ ಅವನತಿ ಕಾಣಲಿದೆ. ಅಂತಹ ಕಾಲಗಟ್ಟದಲ್ಲಿ ನಾವು ನಿಂತಿದ್ದೇವೆ. ಈ ದೇಶವು ಅನೇಕ ಹೋರಾಟ ಕಂಡು, ಜೀರ್ಣಿಸಿಕೊಂಡಿದೆ. ಹೀಗಾಗಿ, ಬಹಳಷ್ಟು ಕಾಲ ಸರ್ವಾಧಿಕಾರ ಉಳಿಯುವುದಿಲ್ಲ ಎಂದು ಮಹದೇವಪ್ಪ ಹೇಳಿದರು.

ಬರಹಗಾರ ಕಾಂಚ ಐಲಯ್ಯ ಮಾತನಾಡಿ, ಬಸವಣ್ಣ, ಅನುಭವ ಮಂಟಪ, ಕನಕದಾಸರು ನಮ್ಮ ಮೇಲೆ ಪರಿಣಾಮ ಬೀರಿದ್ದಾರೆ. ನಂಜುಂಡಸ್ವಾಮಿ ಅವರಂತಹ ರೈತರ ಹೋರಾಟ ನಮಗೆ ಸ್ಫೂರ್ತಿ ಎಂದರು.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅರಳಲಿಕ್ಕೆ ಅವಕಾಶ ಕೊಟ್ಟಿದ್ದು ಸರಿಯಲ್ಲ. ಪ್ರಜಾಪ್ರಭುತ್ವ, ಸಂವಿಧಾನದ ಬದಲಿಗೆ ಮಂದಿರ ಶ್ರೇಷ್ಠ ಎಂದು ಪ್ರತಿನಿಧಿಸ ಹೊರಟಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಮುಸ್ಲಿಂ ರಾಷ್ಟ್ರ ಎಂದು ಘೋಷಿಸಿಕೊಂಡ ರಾಷ್ಟ್ರಗಳೆಲ್ಲವೂ ಸಮಸ್ಯೆ ಎದುರಿಸುತ್ತಿವೆ. ಕಾರ್ಮಿಕರು, ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಕನಿಷ್ಠ ಎರಡು ಭಾಷೆ ಕಲಿಯಬೇಕು. ಇಂಗ್ಲಿಷ್ ಕಡ್ಡಾಯ ಆಗಬೇಕು. ಇಂಗ್ಲಿಷ್ ಶಿಕ್ಷಣ ನೀಡಿದರೆ ಬಿಜೆಪಿ ಹೊರ ಹಾಕಲು ಸಾಧ್ಯ. ಆರ್‌ಎಸ್‌ಎಸ್ ಅವರು ಪ್ರಾದೇಶಿಕ ಭಾಷೆಗೆ ಒತ್ತು ಕೊಡುತ್ತಿರುವ ಹಿಂದೆ ಬೇರೆ ಉದ್ದೇಶವೇ ಇದೆ. ಈ ದೇಶ ಕಟ್ಟಿದ್ದು ಇಲ್ಲಿನ ಮೂಲ ನಿವಾಸಿಗಳೇ ಹೊರತು ಶರ್ಮ, ಶಾಸ್ತ್ರಿಗಳಲ್ಲ ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ, ಲೇಖಕಿ ಸುಕನ್ಯಾ ಕನಾರಳ್ಳಿ, ಚಿಂತಕ ಬಸವರಾಜು, ಸವಿತಾ ಮಲ್ಲೇಶ್, ರಂಗಕರ್ಮಿ ಜನಾರ್ದನ್, ಹೋರಾಟಗಾರ ಉಗ್ರನರಸಿಂಹಗೌಡ, ಸಾಹಿತಿ ನಾ.ದಿವಾಕರ, ಚಿಂತಕ ಪ್ರೊ.ಕಾಳಚನ್ನೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net