

ಚಿಕ್ಕೋಡಿ: ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸಿದರೆ ಮಾತ್ರ ದೇಶ ಮುಂದುವರಿಯಲು ಸಾಧ್ಯ ಎಂದು ಪ್ರಧಾನ ಹಿರಿಯ ನ್ಯಾಯಾಧೀಶ ಹರೀಶ ಪಾಟೀಲ ಹೇಳಿದರು.
ಪಟ್ಟಣದ ಚಿದಾನಂದ ಬಸಪ್ರಭು ಕೋರೆ ಬಹುತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಿವಿಧ ಸಂಘ, ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಮಾತನಾಡಿ, ಸಾಮಾಜಿಕ ಪಿಡುಗು ತೊಡೆದು ಹಾಕುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ಮಾತನಾಡಿ, ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಪ್ರಾಂಶುಪಾಲ ದರ್ಶನಕುಮಾರ ಬಿಳ್ಳೂರ ಮಾತನಾಡಿದರು. ಉಪನ್ಯಾಸಕರಾದ ಎಂ.ಬಿ.ನಾವಿ ಸ್ವಾಗತಿಸಿದರು, ಸ್ವಾತಿ ಕಬನೂರೆ ನಿರೂಪಿಸಿದರು.