

ಮೂಡಿಗೆರೆ: ಕಾಂಗ್ರೆಸ್ ಸರ್ಕಾರ ಶ್ರೀಮಂತರಿಗೆ ಅರಣ್ಯ, ಕಂದಾಯ ಸೇರಿದಂತೆ ಒತ್ತುವರಿ ಮಾಡಿಕೊಂಡಿರುವ ಇತರ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಹೊರಟಿರುವುದು ಸರಿಯಲ್ಲ. ಒತ್ತುವರಿ ಭೂಮಿ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಭೂ ಸಂಘರ್ಷ ಸಮಿತಿ ಅಧ್ಯಕ್ಷ ಬಿ.ರುದ್ರಯ್ಯ ಒತ್ತಾಯಿಸಿದರು.
ಒತ್ತುವರಿ ಜಮೀನು ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದ ನಂತರ ಶ್ರೀಮಂತರು ಸಿಕ್ಕಸಿಕ್ಕ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಕೆರೆ, ಸ್ಮಶಾನ, ಬಡವರ ಭೂಮಿ ಸೇರಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಾಗವನ್ನು ಕಬಳಿಸಿಕೊಂಡಿದ್ದಾರೆ. ಅರಣ್ಯ ಭೂಮಿ ಒತ್ತುವರಿ ತೆರವಿಗೆ ಅಧಿಕಾರಿಗಳು ತಯಾರಿ ನಡೆಸಿದಾಗ ಒತ್ತುವರಿದಾರರು ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಅವರೊಂದಿಗೆ ಜಿಲ್ಲೆಯ ಶಾಸಕರೂ ಭಾಗಿಯಾಗಿದ್ದಾರೆ. ಫಾರ್ಮ್ 53ರಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಒಂದೆರಡು ಎಕರೆ ಭೂಮಿಯನ್ನು ಖುಲ್ಲಾಗೊಳಿಸಲು ತಯಾರಿ ನಡೆದಿದೆ. ಶ್ರೀಮಂತರ ನೂರಾರು ಎಕರೆ ಒತ್ತುವರಿಯನ್ನು ಗುತ್ತಿಗೆ ನೀಡಲು ಸರ್ಕಾರ ಹೊರಟಿರುವುದು ಸರಿಯಲ್ಲ. ಸರ್ಕಾರಿ ಕೆರೆ, ಸ್ಮಶಾನ ಜಾಗ ಒತ್ತುವರಿ ಖುಲ್ಲಾಗೊಳಿಸಲು ಆದೇಶ ನೀಡಿದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯ ಅವರನ್ನು ವರ್ಗಾವಣೆ ಮಾಡಿಸಲು ಒತ್ತುವರಿದಾರರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಅವರನ್ನು ವರ್ಗಾಯಿಸಿದರೆ ಜನ ದಂಗೆ ಏಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಭೂ ಸಂಘರ್ಷ ಸಮಿತಿ ಉಪಾಧ್ಯಕ್ಷ ಕೆಳಗೂರು ರಮೇಶ್ ಮಾತನಾಡಿ, ಬಾಲಸುಬ್ರಹ್ಮಣ್ಯಂ ವರದಿ ಪ್ರಕಾರ 106249 ಎಕರೆ ಕಂದಾಯ ಭೂಮಿ, 35.946 ಎಕರೆ ಅರಣ್ಯ ಭೂಮಿ, 38.705 ಎಕರೆ ಗೋಮಾಳ ಒತ್ತುವರಿಯಾಗಿದೆ. ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಅಧಿಕಾರಿಗಳು 2018 ರಿಂದ 2022 ರವರೆಗೆ 5 ವರ್ಷದಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ 1327 ಎಕರೆ ಅಕ್ರಮ ಭೂಮಿಯನ್ನು ಪತ್ತೆ ಹಚ್ಚಲು ಸರ್ಕಾರದಿಂದ ನೇಮಕಗೊಂಡ 15 ತಹಸೀಲ್ದಾರರ ತಂಡ ಪತ್ತೆ ಹಚ್ಚಿ ಅಕ್ರಮ ಖಾತೆಯನ್ನು ವಜಾಗೊಳಿಸಿದೆ. ಇನ್ನೂ ಖಾತೆಯಾಗಿರುವ 9412 ಎಕರೆ ಭೂಮಿಯ ಬಗ್ಗೆ ಅದೇ ತಂಡದಿಂದ ತನಿಖೆ ನಡೆಯುತ್ತಿದೆ. ಎರಡೂ ತಾಲೂಕಿನಲ್ಲಿ 40 ಸಾವಿರ ನಿವೇಶನ ರಹಿತರಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 15 ಸಾವಿರ ನಿವೇಶನ ರಹಿತರ ನೋಂದಣಿಯಾಗಿದೆ. ಇನ್ನೂ 25 ಸಾವಿರ ನಿವೇಶನ ರಹಿತರು ನೋಂದಣಿಯಿಂದ ಹೊರಗುಳಿದಿದ್ದಾರೆ. ರಾಣಿಝರಿ ಸಮೀಪದಲ್ಲಿ 820 ಎಕರೆ ಜಮೀನು ಹೊಂದಿರುವ ಶ್ರೀಮಂತರೊಬ್ಬರಿಗೆ 2018ರಲ್ಲಿ ಅಧಿಕಾರಿಗಳು ಫಾರ್ಮ್ 53ರಲ್ಲಿ 4.38 ಎಕರೆ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಫಾರ್ಮ್ 53ರಲ್ಲಿ ಉಳ್ಳವರಿಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಭೂ ಸಂಘರ್ಷ ಸಮಿತಿ ಮುಖಂಡ ಶಿವಪ್ರಸಾದ್ ಮಾತನಾಡಿ, ಮಳೆಗಾಲದಲ್ಲಿ ಗುಡ್ಡ ಕುಸಿತ ಸೇರಿದಂತೆ ಅನೇಕ ರೀತಿಯಲ್ಲಿ ನಿರಂತರವಾಗಿ ಅನಾಹುತ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಮಾಧವ ಗಾಡ್ಗಿಳ್ ನೇತೃತ್ವದಲ್ಲಿ ಸಮಿತಿ ನೇಮಿಸಿತ್ತು. ಆ ಸಮಿತಿ ನೀಡಿದ ವರದಿಗೆ ವಿರೋಧ ವ್ಯಕ್ತವಾಗಿದ್ದರಿಂದ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೇಮಿಸಿದ್ದು ಆ ಸಮಿತಿ ಇನ್ನೊಂದು ವರದಿ ನೀಡಿದೆ. ಈ ಎರಡೂ ವರದಿಗೂ ವಿರೋಧ ವ್ಯಕ್ತವಾಗಿರುವ ಕಾರಣ ಎರಡೂ ವರದಿಗಳ ಸಾಧಕ-ಬಾಧಕ ಜನರಿಗೆ ತಿಳಿಯಲು ವರದಿಗಳನ್ನು ಸರ್ಕಾರ ಕನ್ನಡದಲ್ಲಿ ಮುದ್ರಿಸಿ, ಜನರಿಗೆ ಹಂಚಬೇಕು. ಚರ್ಚೆ ಬಳಿಕ ಯಾವುದನ್ನು ಜಾರಿಗೊಳಿಸಬೇಕು ಎಂಬ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹರೀಶ್ ನಲ್ಕೆ, ನಾಗೇಶ್ ಸಾಲುಮರ ಇದ್ದರು.