

ತುಮಕೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ , ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕಗಳು ಹಾಗೂ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಆಹಾರ ಭದ್ರತೆ ನಾಶವಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಇದರಿಂದ ಸಾಮಾನ್ಯ ಜನತೆಯ ಮೇಲೂ ಹೊಡೆತ ಬೀಳುತ್ತದೆ. ಕುಲಾಂತರಿ ಬೀಜಗಳ ಬಳಕೆ, ರಾಸಾಯನಿಕ ಕೃಷಿ ಮತ್ತು ಮಾನೋ ಕಲ್ಚರ್‌ಗೆ ಒತ್ತು ನೀಡಿ ಇಡೀ ಪರಿಸರವೇ ನಾಶವಾಗುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದರು. ಎಐಕೆಎಸ್‌ಸಿಸಿ ಸಂಚಾಲಕ ಸಿ.ಯತಿರಾಜು ಮಾತನಾಡಿ, ಇಡೀ ರೈತ ಸಮುದಾಯ ಮತ್ತು ಸಂಘ ಸಂಸ್ಥೆಗಳನ್ನು ಕತ್ತಲಲ್ಲಿಟ್ಟು ಸುಗ್ರೀವಾಜ್ಞೆ ತರುತ್ತಿರುವುದರ ಹಿಂದೆ ಯಾವ ಉದ್ದೇಶವಿದೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ, ಭೂಸುಧಾರಣೆ, ವಿದ್ಯುತ್ ಮತ್ತು ಬೀಜ ಕಾಯ್ದೆ ಎಲ್ಲವೂ ಕಾರ್ಪೋರೇಟ್ ಕುಳಗಳು ನೀಡುವ ಮಾರ್ಗದರ್ಶನದಲ್ಲೇ ಬದಲಾವಣೆಯಾಗುತ್ತಿದ್ದು, ರೈತರ ಶೋಷಣೆಗೆ ಮುಕ್ತವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಪ್ರಧಾನಿಗಳ ಸಬ್ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ಅರ್ಥ ಕಳೆದುಕೊಳ್ಳುವುದು ಎಂದರು.
ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ರೈತರಿಗೆ ಭೂಮಿ ಮತ್ತು ಪರಿಹಾರ ನೀಡುವಾಗ ಕಾನೂನುಗಳ ಸರಮಾಲೆಯೇ ಎದ್ದುಬರುತ್ತವೆ. ಆದರೆ ಇತ್ತೀಚಿನ ಕಾಯ್ದೆಗಳು ಯಾವುದೇ ಆತಂಕವಿಲ್ಲದೆ ಜಾರಿಗೆ ಬರುತ್ತಿರುವುದನ್ನು ನೋಡಿದರೆ ಸರ್ಕಾರದ ನೀತಿ ಯಾರ ಪರ ಎಂಬುದು ಗೊತ್ತಾಗುತ್ತದೆ ಎಂದರು.
ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ರಾಜ್ಯದ 224 ಶಾಸಕರ ಅಭಿಪ್ರಾಯ ಮತ್ತು 6.5 ಕೋಟಿ ಜನರ ಮೇಲೆ ವಿಶ್ವಾಸವಿಲ್ಲದೆ ಸುಗ್ರೀವಾಜ್ಞೆ ತರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದಂತಾಗಿದೆ ಎಂದರು. ಕರೊನಾ ಸೋಂಕು ಹರಡುವುದನ್ನು ಸಮರ್ಥವಾಗಿ ತಡೆಯದೆ ರೈತಕಾರ್ಮಿಕರು ಆತಂಕದಲ್ಲಿರುವಾಗ ಇಂತಹ ಕಾಯ್ದೆಗಳ ಅವಶ್ಯಕತೆ ಇತ್ತೇ ಎಂದು ನಿವೃತ್ತ ಡಿಡಿಪಿಯು ಕೆ.ದೊರೈರಾಜು ಪ್ರಶ್ನಿಸಿದರು.
ರೈತ ಮುಖಂಡರ ಜತೆ ಸಚಿವರ ಚಕಮಕಿ!: ಧರಣಿ ನಿರತ ರೈತರಿಂದ ಮನವಿ ಸ್ವೀಕರಿಸಲು ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ರೈತ ಮುಖಂಡರ ನಡುವೆ ವಾಗ್ವಾದ ನಡೆಯಿತು. ರೈತ ಮುಖಂಡರ ಆರೋಪದಿಂದ ಕೋಪಗೊಂಡ ಸಚಿವರು, ಮನವಿ ಸ್ವೀಕರಿಸುವ ಮುಂಚೆ ಕಾರು ಏರಿ ಕುಳಿತರು.ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವರಿಕೆಯ ನಂತರ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಮಾಧುಸ್ವಾಮಿ, ಹಾಲಿ ಕಾಯ್ದೆಯಲ್ಲಿ ನೀರಾವರಿ ಆಧಾರಿತ ಭೂಮಿ ಕೈಬಿಡುವುದು ಮತ್ತು ಭೂಮಿ ಖರೀದಿಗೆ ಮನವಿ ಬರುತ್ತಿರುವುದನ್ನು ಮನಗಂಡು ಈ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ. ಆದರೆ, ನೀವು ನೀಡಿರುವ ಮನವಿ ಪರಿಗಣಿಸಲಾಗುವುದು ಎಂದರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡ ರೈತರಿಂದ ಮನವಿ ಸ್ವೀಕರಿಸಿದರು.
ಎಐಕೆಎಸ್‌ಸಿಸಿ ಕಾರ್ಯದರ್ಶಿ ಬಿ.ಉಮೇಶ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಶಂಕರಪ್ಪ, ಮುಖಂಡರಾದ ವೆಂಕಟೇಗೌಡ, ಎಚ್.ಎಂ.ರವೀಶ್, ಲೋಕೇಶ್, ಚಿಕ್ಕವೆಂಕಟೇಗೌಡ, ಜಯರಾಮಯ್ಯ, ಪುಟ್ಟಸ್ವಾಮಿ, ಪ್ರಾಂತ ರೈತ ಸಂಘದ ಮುಖಂಡರು ಇದ್ದರು.