ಮಾಧ್ಯಮ ಆರ್ಥಿಕ ಲಾಭ ಗಳಿಕೆಯ ಕ್ಷೇತ್ರವಲ್ಲ ಅಭಿಮತ ಟಿವಿ ಪಂಚಮ ಸಂಭ್ರಮದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿಕೆ

mng-sep3-abimatha4
Published on

ಮಂಗಳೂರು:ನೈಜ ಸುದ್ದಿಗಳನ್ನು ಸಮಾಜದ ಮುಂದಿಡುವುದು ಪತ್ರಕರ್ತರ ಕರ್ತವ್ಯ. ಮಾಧ್ಯಮ ಆರ್ಥಿಕ ಲಾಭ ಗಳಿಕೆಯ ಕ್ಷೇತ್ರವಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಮುನ್ನಡೆಯುವುದು ಪತ್ರಿಕಾ ಧರ್ಮ ಎಂದು ಮುಂಬೈಯ ಹೇರಂಭಾ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.


ಯೆಯ್ಯಡಿಯ ಶರಬತ್‌ಕಟ್ಟೆ ಶ್ರೀನಿ ಟವರ್‌ನಲ್ಲಿ ಭಾನುವಾರ ‘ಅಭಿಮತ ಟಿವಿ’ಯ ಪಂಚಮ ಸಂಭ್ರಮ ಹಾಗೂ ಸುಸಜ್ಜಿತ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಅನುಭವ ಹಾಗೂ ಪ್ರತಿಭೆಯನ್ನು ಬಳಸಿಕೊಂಡು ಡಾ.ಮಮತಾ ಪಿ. ಶೆಟ್ಟಿ ಅವರು ಏಕಾಂಗಿಯಾಗಿ ಹಲವು ಏಳು ಬೀಳುಗಳ ನಡುವೆ ಅಭಿಮತ ಟಿವಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಪೂರ್ಣ ಸಹಕಾರ ನೀಡುವ ಮೂಲಕ ಸಂಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಪಣ ತೊಟ್ಟಿದ್ದೇವೆ. ಯಶಸ್ಸು ಗಳಿಸುವುದರಲ್ಲಿ ಸಂಶಯವಿಲ್ಲ ಎಂದರು.


ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪತ್ರಿಕಾ ಮೌಲ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಅಭಿಮತ ಟಿವಿ ಪತ್ರಿಕಾ ಧರ್ಮ ಪಾಲಿಸಿಕೊಂಡು ನೈಜ ಸುದ್ದಿಯನ್ನು ತಲುಪಿಸುವ ಕೆಲಸ ಮಾಡಬೇಕು. ಮಹಿಳೆಯಾಗಿ ಮಾಧ್ಯಮವನ್ನು ಮುನ್ನಡೆಸುತ್ತಿರುವುದು ಮಮತಾ ಅವರ ಸಾಧನೆಯಾಗಿದೆ ಎಂದರು.


ಶಾಸಕ ಅಶೋಕ್ ಕುಮಾರ್ ರೈ, ವೇದವ್ಯಾಸ ಕಾಮತ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅನಘಾ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಎನ್.ವಿ.ಶಾಂಭಶಿವಾ ರಾವ್, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಯಕ್ಷಧ್ರುವ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ದೇರಳಕಟ್ಟೆ ವಿದ್ಯಾರತ್ನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮನಪಾ ಸದಸ್ಯೆ ಶಕೀಲಾ ಕಾವ, ಸರ್ಕಾರಿ ಮಹಿಳಾ ಐಟಿಐ ಪ್ರಾಂಶುಪಾಲ ಶಿವಕುಮಾರ್, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, ಹಾಜಿ ಉಸ್ಮಾನ್ ಕರೋಪಾಡಿ ಮೊದಲಾದವರಿದ್ದರು.


ಈ ಸಂದರ್ಭ ಸಂಸ್ಥೆಗೆ ಸಹಕಾರ ನೀಡಿದ ಕನ್ಯಾನ ಸದಾಶಿವ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ರವೀಂದ್ರ ಶೆಟ್ಟಿ ಬಜಗೋಳಿ, ಎ.ಕೆ.ಕಾರ್ಲ ಅವರನ್ನು ಸನ್ಮಾನಿಸಲಾಯಿತು.


ನಿತೇಶ್ ಶೆಟ್ಟಿ ಹಾಗೂ ಮಂದಾರ ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಲಾಭಾಂಶದಲ್ಲಿ 1 ಪಾಲು ಸಮಾಜಕ್ಕೆ
ಅಭಿಮತ ಟಿವಿ ಇದುವರೆಗೆ ಯಾವುದೇ ಲಾಭ ಗಳಿಸಿಲ್ಲ. ಮುಂದಕ್ಕೆ ಲಾಭ ಬರುವ ನಿರೀಕ್ಷೆ ಇದೆ. ಅದರಲ್ಲಿ ಒಂದು ಪಾಲು ‘ಸದಾ ಹಸ್ತ’ ಹೆಸರಿನಲ್ಲಿ ನಮಗೆ ಆರ್ಥಿಕ ಸಹಾಯ ನೀಡಿ ಸಂಸ್ಥೆಗೆ ಬೆನ್ನೆಲುಬಾಗಿ ನಿಂತ ಕನ್ಯಾನ ಸದಾಶಿವ ಶೆಟ್ಟಿ ಅವರ ಕೈಯಿಂದಲೇ ಸಮಾಜಕ್ಕೆ ಅರ್ಪಿಸಲಾಗುವುದು. ಹೊಸತನದೊಂದಿಗೆ ಅ.1ರಿಂದ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಪ್ರಸಾರವಾಗಲಿದೆ. ಕಷ್ಟದಲ್ಲಿದ್ದಾಗ ಹಲವು ಮಂದಿ ಅಪಪ್ರಚಾರ ಮಾಡಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸಿದರು. ಅವರಿಗೆ ಈ ಮೂಲಕ ಉತ್ತರ ನೀಡುತ್ತಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥೆ ಡಾ.ಮಮತಾ ಶೆಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net