

ಅಥಣಿ: ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಸವಾಲಾತ್ಮಕ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗುವುದು, ಅಧ್ಯಾಪಕರ ಜ್ಞಾನಕ್ಕಿಂತ ವಿದ್ಯಾರ್ಥಿಗಳ ಸಾಮರ್ಥ್ಯ ಆಧರಿಸಿ ಬೋಧಿಸಬೇಕು ಎಂದು ಆರ್‌ಸಿಯು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ರವೀಂದ್ರ ಕದಮ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಪದವಿ ಮಹಾವಿದ್ಯಾಲಯದಲ್ಲಿ ಪಠ್ಯಕ್ರಮ ಕಲಿಕೆ ಮತ್ತು ನಿರ್ವಹಣೆ ಕುರಿತು ಏರ್ಪಡಿಸಿದ್ದ ಬಹುಶಿಸ್ತೀಯ ಅಧ್ಯಾಪಕರ ಕಾರ್ಯಾಗಾರ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ಕಲಿಕೆಯ ಕೌಶಲ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಪಠ್ಯಕ್ರಮ ಎಷ್ಟು? ಹೇಗೆ? ಯಾವ ರೀತಿ ಬೋಧಿಸಬೇಕೆಂಬುದರ ಜತೆಗೆ ಪಠ್ಯಕ್ರಮಗಳ ಸಮಸ್ಯೆ ನಿವಾರಣೆಗೆ ಇಂತಹ ಕಾರ್ಯಾಗಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಬದಲಾವಣೆ ಜಗದ ನಿಯಮ. ತಕ್ಷಶಿಲಾ, ನಳಂದಾ ವಿಶ್ವವಿದ್ಯಾಲಯಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಕುರುಹು ಎಂದರು. ಪ್ರಾಚಾರ್ಯ ಡಾ. ಬಿ.ಎಸ್. ಕಾಂಬಳೆ, ಮಂಜುನಾಥ ಹೊಳ್ಳಿ, ಇಮ್ರಾನ್ ಮುಲ್ಲಾ, ನಾಗಿರೆಡ್ಡಿ, ಮಲ್ಲಿಕಾರ್ಜುನ ಬಿರಾದಾರ ಇತರರು ಇದ್ದರು.