

ಮೈಸೂರು: ಕೃಶವಮೃಪಾ ಸಂವರ್ಧನ ಸಮಿತಿ, ಅಭ್ಯುದಯದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯ ‘ಆರೋಹಣ’ ಯಶಸ್ವಿಯಾಗಿ ನಡೆಯಿತು.
ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್‌ಎಸ್ ವಿದ್ಯೋದಯ ಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಅಲ್ಲದೆ ವಿವಿಧ ಜಿಲ್ಲೆಗಳಿಂದ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್ ಅಧ್ಯಕ್ಷರೂ, ದಿ ಮೈಸೂರ್ ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಷನ್ ಸಹ ಸಂಸ್ಥಾಪಕರೂ ಆದ ಪ್ರೊ.ಉದಯ ಬಿರ್ಜೆ ರಘುನಾಥ್ ಹಾಗೂ ಸೈಕ್ಲೊಪ್ಸ್ ಮೆಡ್ಟೆಕ್ನ್ ಸಹ ಸಂಸ್ಥಾಪಕ ನಿರಂಜನ ಸುಬ್ಬರಾವ್ ಅವರು ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ರಕಲೆ, ಭಗವದ್ಗೀತೆ, ದೇಶಭಕ್ತಿ ಗೀತೆ, ಏಕಾತ್ಮತ ಸ್ತೋತ್ರ, ಸೂರ್ಯ ನಮಸ್ಕಾರ, ಜಾನಪದ ನೃತ್ಯ ಸ್ಪರ್ಧೆಗಳನ್ನು ನಾಲ್ಕರಿಂದ ಆರನೇ ತರಗತಿಯವರೆಗೆ ಒಂದು ವಿಭಾಗದಲ್ಲಿ ಹಾಗೂ ಏಳರಿಂದ 9ನೇ ತರಗತಿಗೆ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದಂತಹ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಅಭ್ಯುದಯದ ಕಾರ್ಯನಿರ್ವಹಣಾಧಿಕಾರಿ ಡಿ.ಲಕ್ಷ್ಮೀನಾರಾಯಣ, ಮೈಸೂರು ಉಸ್ತುವಾರಿ ಕಾರ್ಯದರ್ಶಿ ಫಣೀಂದ್ರ ಬೆಳ್ಳೂರು, ಆಯೋಜಕರಾದ ವಿದ್ಯಾಶಂಕರ್, ಮಂಜುನಾಥ್, ವೇಣುಗೋಪಾಲ್, ಯೋಜನೆಯ ಸಂಯೋಜಕರಾದ ಮನೀಶ್, ಅಜಿತ್, ಸಿದ್ಲಿಂಗು, ಅನ್ನಪೂರ್ಣ, ಸುಮತಿ ಇತರರು ಇದ್ದರು.