

ಮಡಿಕೇರಿ:
ಪೋಷಣ ಮಾಸಾಚರಣೆ ಮತ್ತು ಸ್ವಾಸ್ಥನಾರಿ ಸಶಕ್ತ ಕುಟುಂಬ ಅಭಿಯಾನದಡಿ ಗರ್ಭಿಣಿ, ಬಾಣಂತಿ, ಮಕ್ಕಳು, ಅಂಗನವಾಡಿ ಕಾರ್ಯಕತೆಯರು ಮತ್ತು ಸಹಾಯಕರಿಗೆ ಆರೋಗ್ಯ ತಪಾಸಣೆ ನಡೆಸಿ ಅನೀಮಿಯ, ಎಚ್‌ಬಿ, ಬಿಪಿ, ಶುಗರ್, ಪರಿಶೀಲನೆ ಸ್ಟೋನ್ ಹಿಲ್ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆಸಲಾಯಿತು.
ಈ ಸಂದರ್ಭ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ ಶಿಶು ಮತ್ತು ಬಾಲ್ಯ ಪೋಷಣ ಅಭ್ಯಾಸಗಳು, ಪ್ರಾಥಮಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದ, ಪೋಷಣ್ ಬಿ ಪಡಾಯಿ ಬಿ ಕುರಿತು ಮಾಹಿತಿ ನೀಡಿದರು. ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಕಾರ್ಯಕರ್ತೆಯರು ಹೆಚ್ಚಿನ ಜಾಗೃತಿ ಮೂಡಿಸಬೇಕು. ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಇಲಾಖೆಯ ಮೇಲ್ವಿಚಾರಕರು, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಹಿಳೆಯರಿಗೆ ಆರೋಗ್ಯಕರ ಜೀವನ ಶೈಲಿ ಅಭ್ಯಾಸಗಳ ಕುರಿತು ಮಾರ್ಗದರ್ಶನ ನೀಡಿದರು. ಪ್ರಸವ ಪೂರ್ವ ಆರೈಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರದ ಬಳಕೆ, ಮುಟ್ಟಿನ ನೈರ್ಮಲ್ಯ, ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ಸಹಾಯಕಿ ರೇವತಿ ಮಹಿಳೆಯರು ಮತ್ತು ಮಕ್ಕಳಿಗೆ ಒದಗಿಸುವ ಸೇವೆಗಳು, ಮಹಿಳೆಯರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ ಕಾಯಿಲೆಗಳು, ರಕ್ತಹೀನತೆ ಪರೀಕ್ಷೆ, ಗರ್ಭಿಣಿಯರಿಗೆ ಪ್ರಸವಪೂರ್ವ ತಪಾಸಣೆ, ಮಕ್ಕಳಿಗೆ ಲಸಿಕಾ ಸೌಲಭ್ಯ, ಸ್ತನ ಕ್ಯಾನ್ಸರ್ ಅನ್ನು ಹೇಗೆ ಮನೆಯಲ್ಲಿ ಸ್ವಯಂ ಪರೀಕ್ಷೆಯ ಮೂಲಕ ಕಂಡು ಹಿಡಿಯುವುದು ಮತ್ತು ಮೊದಲನೇ ಹಂತದಲ್ಲಿ ಇದನ್ನು ಹೇಗೆ ಚಿಕಿತ್ಸೆ ನೀಡಿ ಸರಿಪಡಿಸಬಹುದು ಎಂಬ ಮಾಹಿತಿಯನ್ನು ನೀಡಿದರು.
ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಆರು ತಿಂಗಳು ತುಂಬಿದ ಮಗುವಿಗೆ ಅನ್ನ ಪ್ರಾಸನ ಕಾರ್ಯಕ್ರಮವು ನೆರವೇರಿತು.
ಸ್ಟೋನ್‌ಹಿಲ್ ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ರಾಜೇಶ್ವರಿ ನಗರ ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಕಸಬ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.