

ಆನೇಕಲ್: ತಾಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗೆ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮಂಜುಳಾ ವೆಂಕಟಮಾರೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದೀಪಿಕಾ ಘೋಷಣೆ ಮಾಡಿದರು.
ಪದ್ಮಾಗೋವಿಂದರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.
ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ. ನಾಗರಾಜು ಮಾತನಾಡಿ, ಅಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ಇಂಡ್ಲವಾಡಿ ಗ್ರಾಪಂನಲ್ಲಿ ವರ್ಷದಿಂದ ಪಕ್ಷ ಭೇದವಿಲ್ಲದೆ ಒಗ್ಗಟ್ಟಿನಿಂದ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಂಡು ಬರುತ್ತಿದ್ದು, ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ನಾರಾಯಣಪ್ಪ ಮಾತನಾಡಿ, ಇಂಡ್ಲವಾಡಿ ಗ್ರಾಪಂನಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಸಲುವಾಗಿ ಪಕ್ಷಭೇದ ಮರೆತು ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡ ಎನ್.ಶಂಕರ್ ಮಾತನಾಡಿ, ಇಂಡ್ಲವಾಡಿ ಗ್ರಾಪಂ ರಾಜ್ಯಕ್ಕೆ ಮಾದರಿಯಾಗಿದೆ, ಎಲ್ಲ ಗ್ರಾಪಂಗಳಲ್ಲಿ ಇದೇ ರೀತಿ ಒಗ್ಗಟ್ಟಿನ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷೆ ಮಂಜುಳಾ ವೆಂಕಟಮಾರೇಗೌಡ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಮೂಲ ಸೌಕರ್ಯಗಳಿಗೆ ಒತ್ತು ನೀಡುವ ಮೂಲಕ ಮತದಾರರ ಋಣ ತೀರಿಸುವುದಾಗಿ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್ ಗೌಡ, ತಾಲೂಕು ಪಂಚಾಯಿತಿ ಸದಸ್ಯ ಮಹದೇವಯ್ಯ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಅಚ್ಚುತ್ ರಾಜು, ಜೆಡಿಎಸ್ ಮುಖಂಡ ಶುಭಾನಂದ್, ಗ್ರಾಪಂ ಮಾಜಿ ಅಧ್ಯಕ್ಷರಾದ ಕುಳ್ಳಪ್ಪ, ಪದ್ಮಾಗೋವಿಂದರಾಜು, ಮಂಗಳಾ, ಉಪಾಧ್ಯಕ್ಷ ಮಧುಸೂದನ್, ಮಾಜಿ ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ಐ.ಸಿ.ಎಂ.ಕೃಷ್ಣಮೂರ್ತಿ, ಶ್ರೀನಿವಾಸ್, ವಾಸು, ತಿಮ್ಮರಾಜು, ಕರಿಯಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ವೆಂಕಟೇಶ್ ಇತರರು ಇದ್ದರು.