ಕಾವೇರಿ ತೀರ್ಥದಿಂದ ಕಾಶಿ ವಿಶ್ವನಾಥನಿಗೆ ಅಭಿಷೇಕ

21 gkp 01
Published on

ಗೋಣಿಕೊಪ್ಪ: ಕಾವೇರಿ ಮಾತೆಯ ಉಗಮಸ್ಥಾನ ತಲಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥ ಕಾಶಿ ವಿಶ್ವನಾಥನ ಸನ್ನಿಧಿ ತಲುಪಿದ್ದು, ಭಾನುವಾರ ಕೊಡಗಿನ ಭಕ್ತರ ಮೂಲಕ ಕಾಶಿ ವಿಶ್ವನಾಥನಿಗೆ ಅಭಿಷೇಕಗೊಂಡಿದೆ. ಅಲ್ಲದೇ, ಕಾವೇರಿ ತೀರ್ಥ ಸೋಮವಾರ ಅಯೋಧ್ಯೆಯ ಬಾಲರಾಮನನ್ನು ತಲುಪಿದೆ.


ಕೊಡವ ರೈಡರ್ಸ್ ಕ್ಲಬ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸಂಸ್ಥೆಗಳು ಪ್ರತಿವರ್ಷ ತುಲಾ ಸಂಕ್ರಮಣದಂದು ಪೊನ್ನಂಪೇಟೆಯಿಂದ ಭಾಗಮಂಡಲಕ್ಕೆ ಬಸ್ಸಿನಲ್ಲಿ ತೆರಳಿ ನಂತರ ಭಾಗಮಂಡಲದಿಂದ ಕಾಲ್ನಡಿಗೆಯಲ್ಲಿ ತಲಕಾವೇರಿಗೆ ತೆರಳುತ್ತಿತ್ತು. ಈ ವರ್ಷ ತಲಕಾವೇರಿ ತೀರ್ಥೋದ್ಭವಕ್ಕೆ ಹೊರಟ ಕೊಡವ ರೈಡರ್ಸ್ ಕ್ಲಬ್ ಸಂಸ್ಥಾಪಕ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ತಲಕಾವೇರಿಯಿಂದ ಕಾಶಿ ವಿಶ್ವನಾಥನ ಸನ್ನಿಧಿಗೆ ಕಾವೇರಿ ತೀರ್ಥವನ್ನು ಬೈಕ್ ಮೂಲಕ ಕೊಂಡೊಯ್ದು ವಿಶ್ವನಾಥನಿಗೆ ಅರ್ಪಿಸಬೇಕು ಎಂಬ ಮಹದಾಸೆ ಹೊಂದಿದ್ದರು.


ಕೊನೆಯ ಗಳಿಗೆಯಲ್ಲಿ ದ್ವಿಚಕ್ರದಲ್ಲಿ ತೆರಳುವ ಅಲೋಚನೆ ಕೈಬಿಟ್ಟು ಕುಟುಂಬ ಸಮೇತರಾಗಿ ಬೆಂಗಳೂರಿನಿಂದ ಫ್ಲೈಟ್ ಮೂಲಕ ಕಾಶಿಗೆ ತೆರಳಿ, ಕೊಡಗು ಜಿಲ್ಲೆಯ ಆರ್‌ಎಸ್‌ಎಸ್ ಪ್ರಮುಖ ಚಕ್ಕೇರ ಮನು ಅವರ ಮೂಲಕ ಅಲ್ಲಿನ ಆರ್‌ಎಸ್‌ಎಸ್ ಪ್ರಮುಖರಾದ ರಮೇಶ್ ಕುಮಾರ್ ಹಾಗೂ ದೀನ್ ದಯಾಳ್ ಪಾಂಡೆ ಅವರನ್ನು ಸಂಪರ್ಕಿಸಿ ಅವರ ಸಹಾಯದಿಂದ ಕಾವೇರಿ ತೀರ್ಥವನ್ನು ನೇರವಾಗಿ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಿಸುವ ಮೂಲಕ ಕೊಡವರ ಒಳಿತಿಗಾಗಿ ಕಾಶಿ ವಿಶ್ವನಾಥನಲ್ಲಿ ಬೇಡಿಕೊಂಡಿದ್ದಾರೆ.
ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿಯೇ ಕಾಶಿ ವಿಶ್ವನಾಥನಿಗೆ ಅಭಿಷೇಕ ಸಲ್ಲಿಸಿದ ಸಂದರ್ಭದಲ್ಲಿ ಪತ್ನಿ ಗಾನಾ ಸುಬ್ಬಯ್ಯ,ತಂದೆ ಹಾಗೂ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ತಾಯಿ ಕಸ್ತೂರಿ ಮಾದಯ್ಯ, ಅತ್ತೆ ಮಾಚಿಮಂಡ ಯಶೋದಾ ತಿಮ್ಮಯ್ಯ, ಮಕ್ಕಳಾದ ಶಾಶ್ವತ್ ಹಾಗೂ ಸಾಹಿತ್ಯ ಜತೆಗಿದ್ದರು. ಸೋಮವಾರ ಅಯೋಧ್ಯೆಗೆ ತೆರಳಿ ಬಾಲರಾಮನಿಗೆ ಕಾವೇರಿ ತೀರ್ಥವನ್ನು ತಲುಪಿಸುವುದಾಗಿ ಇದೇ ಸಂದರ್ಭದಲ್ಲಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net