ಶಿವನಿಗೆ ಅಭಿಷೇಕ, ಬಿಲ್ವಾರ್ಚನೆ ಶ್ರೇಷ್ಠ

14 ಎಸ್ಕೆಪಿ 2b
ತೊಗರ್ಸಿಯಲ್ಲಿ ಕುಂಭಗಳನ್ನು ಹೊತ್ತ ಮಹಿಳೆಯರು.
Published on

ಶಿಕಾರಿಪುರ: ಶಿವ ಅಭಿಷೇಕ ಪ್ರಿಯ. ವಿಷ್ಣು ನಾದ ಪ್ರಿಯ. ಆದಕಾರಣ ಶಿವನಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ ಮತ್ತು ಕುಂಭಾಭಿಷೇಕಗಳೆಂದರೆ ಎಲ್ಲಿಲ್ಲದ ಪ್ರೀತಿ ಎಂದು ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಕಾರ್ಯದರ್ಶಿ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಗುರುವಾರ ಸಮೀಪದ ತೊಗರ್ಸಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಕುಂಭಾಭಿಷೇಕದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ದಶಕಗಳಿಂದ ನಮ್ಮ ಹಿರಿಯರು ಕುಂಭಾಭಿಷೇಕ ನಡೆಸಿಕೊಂಡು ಬಂದಿದ್ದಾರೆ. ತೊಗರ್ಸಿ ಕ್ಷೇತ್ರ ಅದ್ಭುತವಾದ ಶೈವಕ್ಷೇತ್ರ. ಶ್ರಾವಣ ಮಾಸವಿಡೀ ಸಾವಿರಾರು ಭಕ್ತರು ನಾಡಿನ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಕೆಳದಿಯ ಅರಸರು ಹೆಚ್ಚಿನ ದತ್ತಿದಾನಗಳನ್ನು ನೀಡಿ ಈ ದೇವಸ್ಥಾನ ದ ಅಭಿವೃದ್ಧಿಗೆ ಕಾರಣರಾದರಂತೆ ಎಂದರು.
ಮಳೆಹಿರೇಮಠದ ಕಿರಿಯ ಶ್ರೀಗಳಾದ ಶ್ರೀ ಅಭಿನವ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕವಲಿ ಗ್ರಾಮದ ಗಡಿಯಲ್ಲಿ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿ, ಅಲ್ಲಿಂದ ಮಹಿಳೆಯರು ತುಂಬಿದ ಕುಂಭವನ್ನು ವೇದಘೋಷಗಳ ಮೂಲಕ ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ತರುವುದೆ ವಿಶೇಷ. ಇದು ನಮ್ಮ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆ. ಬರಗಾಲದಿಂದ ನಾಡು ತತ್ತರಿಸಿ ಹೋಗಿದೆ. ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅನುಗ್ರಹದಿಂದ ಮಳೆಯಾಗಿ, ರೈತರಿಗೆ ಅನುಕೂಲವಾಗಲಿ ಎಂದರು.
ಮಳೆಹಿರೇಮಠದ ಹಿರಿಯ ಶ್ರೀಗಳಾದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಗ್ರಾಮಸ್ಥರು, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net