

ಮೈಸೂರು: ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಿ.3 ರಂದು ಬೆಳಗ್ಗೆ 8ಕ್ಕೆ ಚಾಮುಂಡಿ ಬೆಟ್ಟದ ನಂದಿಗೆ 18ನೇ ವರ್ಷದ ಮಹಾಭಿಷೇಕ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎನ್.ಗೋವಿಂದ ಹೇಳಿದರು.
ನಂದಿಗೆ 32 ರೀತಿಯ ಅಭಿಷೇಕ ಮಾಡಲಾಗುವುದು. ಇದಕ್ಕೆ 2.5 ಲಕ್ಷ ರೂ.ವೆಚ್ಚವಾಗಲಿದೆ. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾ ಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಂದು ಬೆಳಗ್ಗೆ 8ಕ್ಕೆ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಹೊಸಮಠದ ಚಿದಾನಂದ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಎಸ್. ಬನ್ನೂರಮಠ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಟ್ರಸ್ಟಿ ಶಂಕರ್ ಮಾತನಾಡಿ, ನಂದಿಗೆ ಕಪ್ಪು ಎಣ್ಣೆ ಹಚ್ಚಲು ಟ್ರಸ್ಟ್‌ಗೆ ಜಿಲ್ಲಾಡಳಿತ ಅನುಮತಿ ನೀಡಬೇಕು. ಎಣ್ಣೆ ಹಚ್ಚದ ಹಿನ್ನೆಲೆಯಲ್ಲಿ ನಂದಿಯ ಸೌಂದರ್ಯ ಹಾಳಾಗಿದ್ದು, ಪ್ರಾಕೃತಿಕ ಸಮಸ್ಯೆಗೂ ತುತ್ತಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಪ್ರಕಾಶನ್, ಖಜಾಂಚಿ ಸುಂದರ್, ಅಭಿಷೇಕ ನಿರ್ವಹಣಾಧಿಕಾರಿ ಶಿವಕುಮಾರ್ ಇದ್ದರು.