

ವಿಜಯಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡಿರುವ ರಾಣಿ ಚನ್ನಮ್ಮ ವಿವಿ 8ನೇ ಅಂತರ ಕಾಲೇಜ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮೊದಲ ದಿನವೇ ಐದು ದಾಖಲೆಗಳು ಸೇರ್ಪಡೆಯಾದವು.
ಪುರುಷ ವಿಭಾಗದಲ್ಲಿ 3, ಮಹಿಳಾ ವಿಭಾಗದಲ್ಲಿ 2 ದಾಖಲೆ ಬರೆಯಲಾಯಿತು. ಬೆಳಗಾವಿಯ ವಿವಿಧ ಕಾಲೇಜ್ ಕ್ರೀಡಾಪಟುಗಳು ಮೊದಲು ದಿನದ ಗೌರವ ಪಡೆದರು.
100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಜಯಪುರದ ಸರ್ಕಾರಿ ಪ್ರಥಮ ಕಾಲೇಜ್‌ನ ಅಭಿಷೇಕ ಚವ್ಹಾಣ 11.20 ಸೆಕೆಂಡ್, ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜ್‌ನ ಅನುಷ್ಕಾ ಶಂಕರಗೌಡ 13.31 ಸೆಕೆಂಡ್‌ನಲ್ಲಿ ನಿಗದಿತ ಅಂತರ ಕ್ರಮಿಸಿ ವೇಗದ ರಾಜ, ರಾಣಿಯಾಗಿ ಮಿಂಚಿದರು.
ಪುರುಷರ ವಿಭಾಗದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳಗಾವಿ ಭರತೇಶ ಕಾಲೇಜ್‌ನ ತುಷಾರ (1ನಿಮಿಷ 55.31 ಸೆಕೆಂಡ್) ಹೊಸ ದಾಖಲೆ ಸೃಷ್ಟಿಸಿದರು. ಈ ಹಿಂದೆ ಬೀಳಗಿಯಲ್ಲಿ 2018ರಲ್ಲಿ ನಡೆದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳಗಾವಿಯ ಲಿಂಗರಾಜ್ ಕಾಲೇಜ್‌ನ ಬಸಪ್ಪ ಮಾಲಂಗಿ 1ನಿಮಿಷ 57.91 ಸೆಕೆಂಡ್‌ನಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದರು.
ಲಾಂಗ್ ಜಂಪ್‌ನಲ್ಲಿ ಬೆಳಗಾವಿ ಭರತೇಶ ಕಾಲೇಜ್ ಜಾಫೇಹಾಖಾನ್ 6.97 ಮೀ. ಉದ್ದ ಜಿಗಿದು ಬೀಳಗಿಯ ಎಸ್‌ಎಂಕೆಬಿ ಕಲಾ, ವಾಣಿಜ್ಯ ಕಾಲೇಜಿನ ಅನುಷ್ ಟಿ.ಆರ್. ಹೆಸರಿನಲ್ಲಿ ಈ ಹಿಂದೆ ಇದ್ದ 6.93 ಮೀಟರ್ ಜಿಗಿತದ ದಾಖಲೆಯನ್ನು ಮುರಿದು ತಮ್ಮ ಹೆಸರಿಗೆ ಹೊಸ ದಾಖಲೆ ಬರೆದರು.
ಡಿಸ್ಕಸ್ ಥ್ರೋದಲ್ಲಿ ವಿಜಯಪುರದ ಎಸ್‌ಬಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜ್‌ನ ಪ್ರೀತಮ್ ರಜಪೂತ 41.26 ಮೀಟರ್ ಎಸೆದಿದ್ದಾರೆ. ಈ ಹಿಂದೆ ಬಾಗಲಕೋಟೆಯ ವಿದ್ಯಾಗಿರಿ ಬಸವೇಶ್ವರ ಕಾಲೇಜ್‌ನ ಹವಾಲ್ದಾರ್ ಎಲ್. 37.51 ಮೀಟರ್ ಉದ್ದ ಎಸೆದಿರುವ ದಾಖಲೆಯನ್ನು ಮುರಿದರು.
ಮಹಿಳೆಯರ ವಿಭಾಗದಲ್ಲಿ ಎರಡು ಹೊಸ ದಾಖಲೆ ಸೃಷ್ಠಿಯಾಗಿವೆ. 400 ಮೀಟರ್ ಹರ್ಡಲ್ಸ್‌ನಲ್ಲಿ ಬೆಳಗಾವಿಯ ಗೋಗಟೆ ಕಾಲೇಜಿನ ಶ್ರಾವಣಿ ಬಾಟೆ 1ನಿಮಿಷ 09.90 ಸೆಕೆಂಡ್‌ನಲ್ಲಿ ಗುರಿ ತಲುಪಿ ಹೊಸ ದಾಖಲೆ ಮಾಡಿದ್ದಾರೆ. ಈ ಹಿಂದೆ 2016ರಲ್ಲಿ ಬೆಳಗಾವಿಯ ಲಿಂಗರಾಜ್ ಕಾಲೇಜ್‌ನ ವೀಣಾ ಅಡಗಿಮನಿ 1ನಿಮಿಷ 15.23 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದ್ದರು.
ಲಾಂಗ್ ಜಂಪ್‌ನಲ್ಲಿ ಬೆಳಗಾವಿಯ ಗೋವಿಂದರಾಮ್ ಸಿಕ್ಸಸರಿಯಾ ಕಾಲೇಜ್‌ನ ಐಶ್ವರ್ಯ ನೇಸರಕರ್ 5.18 ಮೀಟರ್ ಉದ್ದ ಜಂಪ್ ಮಾಡಿದ್ದಾರೆ. ಈ ಹಿಂದೆ ವಿಜಯಪುರ ಎಎಸ್‌ಪಿ ಕಾಲೇಜ್ ವಿದ್ಯಾರ್ಥಿನಿ ಶ್ರದ್ಧಾ ಕಬಾಡೆ 5.14 ಮೀಟರ್ ಜಂಪ ಮಾಡಿದ್ದರು.
ಕೂಟದ ಮೊದಲ ದಿನವೇ ಬೆಳಗಾವಿ ಕಾಲೇಜುಗಳ ಕ್ರೀಡಾಪಟುಗಳು ತಮ್ಮ ಪಾರುಪತ್ಯ ಮೆರೆದರು. ಬೆಳಗಾವಿ ಕೆಎಲ್ಇ ಲಿಂಗರಾಜ್ ಕಾಲೇಜ್ ಪುರುಷರ ವಿಭಾಗದಲ್ಲಿ 24, ಮಹಿಳೆಯರ ವಿಭಾಗದಲ್ಲಿ 56 ಸೇರಿ ಒಟ್ಟು 80 ಪಾಯಿಂಟ್ ಪಡೆದು ಮೊದಲ ದಿನದಂದು ಅಗ್ರಸ್ಥಾನದಲ್ಲಿದೆ.