ಕವಲಕ್ಕಿಯಲ್ಲಿ ಅಭಿನೇತ್ರಿ ಯಕ್ಷೋತ್ಸವ 21ರಿಂದ

HNR YAKSHA
Published on

ಹೊನ್ನಾವರ: ಅಭಿನೇತ್ರಿ ಆರ್ಟ್ ಟ್ರಸ್ಟ್ ನಿಲ್ಕೋಡ ಆಶ್ರಯದಲ್ಲಿ ಅಭಿನೇತ್ರಿ ಯಕ್ಷೋತ್ಸವ ಡಿ. 21 ಮತ್ತು 22ರಂದು ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ ಶಂಕರ ಹೆಗಡೆ ನಿಲ್ಕೋಡ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಕ್ಷೋತ್ಸವದಲ್ಲಿ ಯಕ್ಷಗಾನ ಪ್ರದರ್ಶನ, ತಾಳಮದ್ದಳೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಶಕ್ತ ಕಲಾವಿದರಿಗೆ ಧನಸಹಾಯ ಮಾಡಲಾಗುವುದು ಎಂದರು. ಸಂಘಟಕ ನಾಗರಾಜ ಹೆಗಡೆ ಕಾಸ್ಕಂಡ ಮಾತನಾಡಿ, 21ರಂದು ಸಂಜೆ 6 ಗಂಟೆಗೆ ಯಕ್ಷೋತ್ಸವವನ್ನು ಸಂಸ್ಕೃತ ವಿದ್ವಾಂಸ ಡಾ. ನಾಗಪತಿ ಭಟ್ ಉದ್ಘಾಟಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಕೇಶವ ಹೆಗಡೆ ಕೊಳಗಿ, ಸುಬ್ರಹ್ಮಣ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಟಿ. ಭಟ್, ಯಕ್ಷಗಾನ ಪ್ರೇಮಿ ಎನ್.ಎಸ್. ಭಂಡಾರಿ ಉಪಸ್ಥಿತರಿರುವರು. ನಂತರ ನಳ ದಮಯಂತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 22ರಂದು ಮಧ್ಯಾಹ್ನ 3 ಗಂಟೆಗೆ ‘ಕರ್ಣಭೇದನ’ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ. ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವೇ.ಮೂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಜಿ.ಭಾಗ್ವತ್, ಎಸ್‌ಆರ್‌ಎಲ್ ಗ್ರೂಪ್ ಮಾಲೀಕ ವೆಂಕಟ್ರಮಣ ಹೆಗಡೆ, ಪರ್ಕಳದ ನಿತ್ಯಾನಂದ ನಾಯಕ, ಕವಲಕ್ಕಿಯ ಉಮೇಶ ಹೆಗಡೆ ಅಬ್ಳಿ, ಮೆಕ್ಕೆಕಟ್ಟು ಮೇಳದ ಯಜಮಾನ ರಂಜಿತ್ ಕುಮಾರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾದರರಾವ್ ಜಲವಳ್ಳಿ, ಇತರರು ಉಪಸ್ಥಿತರಿರುವರು. ರಾತ್ರಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳದ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು. ನಿರೂಪಕ ಪ್ರಶಾಂತ ಮೂಡಲಮನೆ ಮಾತನಾಡಿ, ಪ್ರಸಕ್ತ ಸಾಲಿನ ಅಭಿನೇತ್ರಿ ಪ್ರಶಸ್ತಿಯನ್ನು ಹಿರಿಯ ಸ್ತ್ರೀವೇಷಧಾರಿ ಶ್ರೀಧರ ಷಡಕ್ಷರಿ ಅವರಿಗೆ, ‘ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ’ಯನ್ನು ಯಕ್ಷಗಾನದ ಹಿರಿಯ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ, ‘ಕಣ್ಣಿ ಪ್ರಶಸ್ತಿ’ಯನ್ನು ಶ್ರೀಅಮೃತೇಶ್ವರಿ ಮೇಳದ ಭಾಗವತ ರಾಘವೇಂದ್ರ ಮಯ್ಯ ಅವರಿಗೆ ಪ್ರದಾನ ಮಾಡಲಾಗುವುದು. ಇಬ್ಬರು ಅಶಕ್ತ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net