

ಬಸವಕಲ್ಯಾಣ: ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ೩೮ನೇ ಜನ್ಮದಿನ ನಿಮಿತ್ತ ಸಮಾಜದ ಹಿತದೃಷ್ಟಿಯಿಂದ ಜನಜಾಗೃತಿ ಮೂಡಿಸುವಂಥ ವಿನೂತನ ಕಾರ್ಯಕ್ರಮಗಳನ್ನು ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ಮಠದ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಹೇಳಿದರು.
ಆರ್ಯ ಸಮಾಜದಲ್ಲಿ ಭಾನುವಾರ ಸಂಜೆ ಕರೆದಿದ್ದ ಶ್ರೀಗಳ ೧೯ನೇ ಪಟ್ಟಾಧಿಕಾರ ವರ್ಧಂತಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಚಟಗಳ ವಿರುದ್ಧ ಅಭಿನವ ಜೋಳಿಗೆ, ಸಸಿ ನೆಡುವ, ಮೊಬೈಲ್‌ನಿಂದ ಮಕ್ಕಳನ್ನು ದೂರವಿರುವ ಜಾಗೃತಿ ಮೂಡಿಸಲು ಹಿಂದೆ ಶ್ರೀಗಳು ಅಭಿಯಾನ ನಡೆಸಿದ್ದಾರೆ. ಇದೀಗ ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣ ಸಂಕಲ್ಪ ಮಾಡೋಣ ಎಂದರು.
ಯುವ ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿ, ಗವಿ ಮಠದಲ್ಲಿ ಸೆ.೨೮ರಂದು ಶ್ರೀಗಳ ಪಟ್ಟಾಧಿಕಾರ ವರ್ಧಂತಿ ಹಾಗೂ ೩೮ನೇ ಜನ್ಮದಿನ ಕಾರ್ಯಕ್ರಮ ಜರುಗಲಿದೆ. ೨೭ರಂದು ಬೆಳಗ್ಗೆ ೧೦ಕ್ಕೆ ನಗರದಲ್ಲಿ ಪ್ಲಾಸ್ಟಿಕ್‌ಮುಕ್ತ ಜೀವನ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವ ಮುಖಂಡ ಲೋಕೇಶ ಮೊಳಕೆರೆ ಮಾತನಾಡಿ, ಗವಿ ಮಠದ ಶ್ರೀಗಳ ನೇತೃತ್ವದ ಪಾದಯಾತ್ರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘಟನೆ ಮುಖಂಡರು, ಸಾರ್ವಜನಿಕರು, ಗಣ್ಯರು ಭಾಗಿಯಾಗಲಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುತ್ತಿರುವ ಸಮಸ್ಯೆ ಹಾಗೂ ಬಳಕೆ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮ, ವಹಿಸಬೇಕಾದ ಪಾತ್ರ ಕುರಿತು ತಿಳಿವಳಿಕೆ ಮೂಡಿಸುವುದೇ ಪಾದಯಾತ್ರೆ ಆಶಯ ಎಂದರು.
ಶ್ರೀ ಜಯಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ, ತೆಲಂಗಾಣದ ಶ್ರೀ ವೀರೇಶ್ವರ ಶಿವಾಚಾರ್ಯರು ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ಸಂಸದ ಸಾಗರ್ ಖಂಡ್ರೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಶರಣು ಸಲಗರ, ಎಂ.ಜಿ. ಮುಳೆ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ವಿಜಯಸಿಂಗ್, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಭಾಗಿಯಾಗಲಿದ್ದಾರೆ ಎಂದು ಗವಿಮಠದ ಶ್ರೀಗಳು ತಿಳಿಸಿದರು.
ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಆಲಗೂಡೆ, ಕಲ್ಯಾಣರಾವ ಮದರಗಾಂವಕರ್ ಇದ್ದರು.
ಸೆ.೨೭ರಂದು ಬಸವಕಲ್ಯಾಣದ ಗಾಂಧಿ ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ತ್ರಿಪುರಾಂತದ ಮಡಿವಾಳ ಮಾಚಿದೇವರ ವೃತ್ತದವರೆಗೆ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ನೇತೃತ್ವದಲ್ಲಿ ಪ್ಲಾಸ್ಟಿಕ್‌ಮುಕ್ತ ಜೀವನ ಜನಜಾಗೃತಿ ಪಾದಯಾತ್ರೆ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು.
| ಶಿವಕುಮಾರ ಬಿರಾದಾರ ಯುವ ಮುಖಂಡ