ಜಾತ್ರೆಗಳಿಂದ ಸಮಾಜದಲ್ಲಿ ಸಾಮರಸ್ಯ

28BK1New
ಗವಿಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಜಾತ್ರೋತ್ಸವದಲ್ಲಿ ರಾಕೇಶ ಪುರವಂತ ಅವರಿಗೆ ೨೦೨೪ರ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಮೃತ್ಯುಂಜಯ ಶಿವಾಚಾರ್ಯರು, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಶರಣಪ್ಪ ಬಿರಾದಾರ, ಮಹಾದೇವಿ ಪುರವಂತ, ಅಂಬಾರಾಯ ಉಗಾಜಿ, ಶಾಚಿತಯ್ಯ ಮಠಪತಿ, ರಮೇಶ ರಾಜೋಳೆ ಇದ್ದರು.
Published on

ಬಸವಕಲ್ಯಾಣ: ಮಾನವೀಯತೆಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ. ಸಮರ ಜೀವನ ಕೊನೆಗೊಂಡು ಅಮರ ಜೀವನದಡೆ ಕೊಂಡೊಯ್ಯುವುದೇ ಗುರುವಿನ ಧರ್ಮ. ಧರ್ಮ ಹಾಗೂ ದೇಶ ಮಾನವನ ಕಣ್ಣು ಇದ್ದಂತೆ. ಎಲ್ಲರಲ್ಲೂ ಧರ್ಮಪ್ರಜ್ಞೆ ಸಾಮರಸ್ಯ ಬೆಳೆಸುವುದೇ ಜಾತ್ರೆಯ ಮೂಲ ಗುರಿಯಾಗಿದೆ ಎಂದು ಕಲ್ಲೂರಿನ ಶ್ರೀ ಮೃತ್ಯುಂಜಯ ಶಿವಾಚಾರ್ಯರು ನುಡಿದರು.

ನಗರದ ತ್ರಿಪುರಾಂತ ಗವಿಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಜಾತ್ರೋತ್ಸವ ಹಾಗೂ ೨೦೨೪ರ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಯೋಗಿಗಳು ಶರಣರಿಗೆ ಇಷ್ಟಲಿಂಗ ದೀಕ್ಷೆ ಕೊಟ್ಟು ಮುಕ್ತಿಯ ಮಾರ್ಗ ತೋರಿದ ಮಹಾಮಹಿಮರು ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಗವಿಮಠ ಸಂಸ್ಥಾನದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶವಾಗಬಾರದು. ಧರ್ಮ ಸಂಪ್ರದಾಯ ಆಚರಣೆ ಬೇರೆ ಬೇರೆಯಾದರೂ ಎಲ್ಲರ ಗುರಿ ಮಾನವ ಕಲ್ಯಾಣವೇ ಆಗಿದೆ. ಹೀಗಾಗಿ ಈ ಗವಿಮಠದ ಜಾತ್ರೆ ಭಾವೈಕ್ಯತೆಯ ಜಾತ್ರೆಯಾಗಬೇಕು ಎಂದು ಸದಾಶಯ ವ್ಯಕ್ತಪಡಿಸಿದರು.

ಖಟಕ ಚಿಂಚೋಳಿಯ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಅಲಗೂಡ, ಮಡಿವಾಳಯ್ಯ ಸ್ವಾಮಿ, ಬಸವರಾಜ ಬಿರಾದಾರ, ಮಂಜುನಾಥ ಸ್ವಾಮಿ, ನಟರಾಜ ಬಿರಾದಾರ, ಬಸವರಾಜ ಬಿರಾದಾರ, ಶರಣು ಮಠಪತಿ, ಶಾಂತವೀರ ಕಾಪಾಡೆ, ಓಂನಾಥ ಪಾಟೀಲ್, ಪ್ರೊ.ರುದ್ರೇಶ್ವರ ಗೋರ್ಟಾ, ಪ್ರೊ.ಸೂರ್ಯಕಾಂತ ಶೀಲವಂತ, ರಮೇಶ ರಾಜೋಳೆ, ಭೀಮು ಬಚಣೆ, ಶಿವಕುಮಾರ ಬಿರಾದಾರ, ಸದಾನಂದ ಕಣಜೆ, ಸಾಗರ ಮಾಲಗರ, ವಿಠ್ಠಲ ರಾಯಪ್ಪನೋರ ಇತರರಿದ್ದರು.

ಪ್ರಾಚಾರ್ಯ ಶಾಂತಯ್ಯ ಮಠಪತಿ ಪ್ರಾಸ್ತಾವಿಕ ನುಡಿದರು. ಶಿಕ್ಷಕ ಶಿವಕುಮಾರ ಮುನ್ನೋಳೆ ಸ್ವಾಗತಿಸಿದರು. ಅಂಬಾರಾಯ ಊಗಾಜಿ ಕೋಹಿನೂರ ನಿರೂಪಣೆ ಮಾಡಿದರು. ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಿಂದ ಸಂಗೀತ ಸೇವೆ ಜರುಗಿತು. ಮಂಠಾಳ ಮತ್ತು ತೋಗಲೂರ ಮಹಿಳಾ ಭಜನಾ ಮಂಡಳಿಯಿಂದ ಚಕ್ರಿ ಭಜನೆ ಹಾಗೂ ಕೋಲಾಟ ಗಮನ ಸೆಳೆಯಿತು.

ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರದಾನ: ಜಾತ್ರೋತ್ಸವದ ನಿಮಿತ್ತ ರಾಕೇಶ ಪುರವಂತ ಅವರಿಗೆ ೨೦೨೪ರ ಅಭಿನವ ಘನಲಿಂಗ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಸತಿರ್ಥಯ್ಯಾ ಕಾಡಾದೆ, ಲಿಂಗರಾಜ ಬಿರಾದಾರ, ಸಿದ್ರಾಮಪ್ಪ ಕಲ್ಯಾಣಿ ತ್ರಿಪುರಾಂತ ಅವರಿಗೆ ಶ್ರೀ ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು.

ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಯುವ ಸ್ವಾಮಿಗಳಾಗಿ ಸರ್ವ ಭಕ್ತರನ್ನು ಆಕರ್ಷಿಸುವ ಹಾಗೆ ಭಕ್ತರ ಸಹಕಾರದಿಂದ ಶ್ರೀಮಠ ಬೆಳೆಸುತ್ತಿದ್ದಾರೆ. ವಿಶೇಷವಾಗಿ ಭಕ್ತರನ್ನು ಧರ್ಮ ಮಾರ್ಗದಲ್ಲಿ ಮುನ್ನಡೆಸಲು ಸಂಕಲ್ಪ ಮಾಡಿದ್ದಾರೆ.
| ಶ್ರೀ ಬಸವಲಿಂಗ ಮಹಾಸ್ವಾಮೀಜಿ ಖಟಕ ಚಿಂಚೋಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net