ದ್ವೇಷ ರಾಜಕಾರಣವಿಲ್ಲ, ಅಭಿವೃದ್ಧಿಯಷ್ಟೇ ಮುಖ್ಯ: ಶಾಸಕ ರವಿಕುಮಾರ್ ಗಣಿಗ ಸ್ಪಷ್ಟ ನುಡಿ

1 (7)
Published on

ಮಂಡ್ಯ: ದ್ವೇಷದ ರಾಜಕಾರಣ ಮಾಡಲು ನನಗೆ ಬರುವುದಿಲ್ಲ. ಅಭಿವೃದ್ಧಿ ಮಾಡುವುದಷ್ಟೇ ನನ್ನ ಗುರಿ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಗ್ರಾಮದಲ್ಲಿ ಮಂಡ್ಯ ವಿಧಾನಸಭಾ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಬಸರಾಳು ಗ್ರಾಮವನ್ನು ಮಾದರಿಯಾಗಿಸುವುದರ ಜತೆಗೆ ತಾಲೂಕು ಕೇಂದ್ರವಾಗಿ ಮಾಡುವುದು ನನ್ನ ಉದ್ದೇಶವಾಗಿದೆ. ಗ್ರಾಮಕ್ಕೆ ಮಂಜೂರಾಗಿದ್ದ 30 ಹಾಸಿಗೆಯ ಆಸ್ಪತ್ರೆಯನ್ನು 50 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನ ಮಾಡಲಾಗಿದೆ. ಜತೆಗೆ ಹೇಮಾವತಿ ನಾಲೆಯ ಆಧುನೀಕರಣ ಮಾಡುವ ಮೂಲಕ ಬಸರಾಳು ಭಾಗದ ರೈತರು ವ್ಯವಸಾಯ ಮಾಡಲು ನೀರು ಒದಗಿಸುವುದಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಶ್ರೀರಂಗಪಟ್ಟಣದ ಕಾವೇರಿ ನದಿಯಿಂದ ಬಸರಾಳು ಗ್ರಾಮಕ್ಕೆ ಕಾವೇರಿ ನದಿಯ ಕುಡಿಯುವ ನೀರನ್ನು ತರಬೇಕಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯಗತಗೊಳಿಸಲಾಗುವುದು. ಇದರ ಜತೆಗೆ ಗ್ರಾಮಕ್ಕೆ ಬೇಕಾಗಿರುವ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸುವುದು ಮತ್ತು ರಸ್ತೆ ಅಗಲೀಕರಣಕ್ಕೆ ನಿಮ್ಮ ಸಹಕಾರ ಬೇಲಿದೆ. ಶೀಘ್ರದಲ್ಲೇ ಗ್ರಾಮದಲ್ಲೇ ಕಚೇರಿ ತೆರೆಯಲಾಗುವುದು. ಜನರು ಯಾವುದೇ ಸಮಸ್ಯೆ ಇದ್ದರೂ ಅಲ್ಲಿಯೇ ನೀಡಬಹುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಕಾಂಗ್ರೆಸ್ ಮೇಲೆ ನಂಬಿಕೆಯಿಟ್ಟು ಜಿಲ್ಲೆಯ ಜನರು ಬೆಂಬಲ ನೀಡಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿಗೊಳಿಸದೇ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದರು.

ಮಾಜಿ ಶಾಸಕ ಎಚ್.ಬಿ.ರಾಮು, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಅಪ್ಪಾಜಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net