

ಪುತ್ತೂರು: ಕಾರ್ಯಕ್ರಮಕ್ಕಾಗಲೀ, ಮೇಳದ ವ್ಯವಸ್ಥೆಗಾಗಲೀ ತೊಡಕಾಗದಂತೆ ಕಲಾವಿದನಿರಬೇಕು. ಎಲ್ಲ ವ್ಯವಸ್ಥೆಗೆ ಅನುಕೂಲಕರವಾದ ಸೌಜನ್ಯ ಕಲಾವಿದ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇಲಂತಮಜಲು -೬೦ ವಂದನಂ ಅಭಿನಂದನಂ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ.ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ಅವರನ್ನು ಯಕ್ಷಾಭಿಮಾನಿಗಳ ಪರವಾಗಿ ಸನ್ಮಾನಿಸಲಾಯಿತು. ಅಭಿನಂದನಾ ಸಮಿತಿ ಅಧ್ಯಕ್ಷ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮಾಜಿ ಮೊಕ್ತೇಸರ ಕೃಷ್ಣಪ್ರಸಾದ ಅಡ್ಯಂತಾಯ, ಸೇರಾಜೆ ಸತ್ಯನಾರಾಯಣ ಭಟ್ಟ, ಡಾ.ವಿಷ್ಣುಪ್ರಸಾದ್ ಬರೆಕೆರೆ ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ವಾಸುದೇವ ರಂಗಾ ಭಟ್ ಅಭಿನಂದನಾ ಭಾಷಣ ಮಾಡಿದರು. ಡಾ.ಗೋಪಾಲಕೃಷ್ಣ ಭಟ್ ಸನ್ಮಾನ ಪಾತ್ರ ವಾಚಿಸಿದರು. ಗಿರೀಶ್ ಮುಳಿಯಾಲ ವಂದಿಸಿದರು. ಹರೀಶ್ ಬಳಂತಿಮೊಗರು ಕಾರ್ಯಕ್ರಮ ನಿರ್ವಹಿಸಿದರು.
ವಂದನಂ ಕಾರ್ಯಕ್ರಮ
ಸುಬ್ರಹ್ಮಣ್ಯ ಭಟ್ಟರಿಂದ ವಂದನಂ ಕಾರ್ಯಕ್ರಮ ನಡೆಯಿತು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕಲಾಪೋಷಕ ಟಿ.ಶ್ಯಾಮ ಭಟ್, ನೆಡ್ಲೆ ರಾಮ ಭಟ್, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕರ್ನೂರು ಮೋಹನ ರೈ, ಕಾರ್ಗಲ್ಲು ವಿಶ್ವೇಶ್ವರ ಭಟ್, ಕುಲಗುರುಗಳಾದ ಕೇಕಣ್ಣಾಜೆ ಗಣಪತಿ ಭಟ್, ಭಾಗವತ ದಿನೇಶ ಅಮ್ಮಣ್ಣಾಯ, ಮಾಣಿಲ ಗ್ರಾಮದ ಹಿರಿಯ ಮುರುವ ಮಹಾಬಲ ಭಟ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ದೇಲಂತಮಜಲು ಗೋಪಾಲಕೃಷ್ಣ ಭಟ್ ವಂದಿಸಿದರು. ಪತ್ರಕರ್ತ ಲಕ್ಷ್ಮಿ ಮಚ್ಚಿನ ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಮೇಳದವರಿಂದ ‘ನಮೋ ರಘುವಂಶ ದೀಪ’ ಯಕ್ಷಗಾನ ಬಯಲಾಟ ನಡೆಯಿತು.