

ಮಂಡ್ಯ: ಜಿಲ್ಲೆಯ ಮತದಾರರು ಭರವಸೆಯಿಟ್ಟು ನಮ್ಮನ್ನು ಬೆಂಬಲಿಸಿದ್ದಾರೆ. ಅದರಂತೆ ಅಭಿವೃದ್ಧಿ ಕೆಲಸ ಮಾಡುವ ಅವರೆಲ್ಲರ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಕ್ಕಪಕ್ಕದ ಜಿಲ್ಲಾ ಕೇಂದ್ರಗಳಿಗಿಂತ ಮಂಡ್ಯ ಹಿಂದುಳಿದಿರಲು ಕಾರಣವೆನ್ನೆಂದು ಎಲ್ಲರಿಗೂ ಗೊತ್ತು. ಆದರೂ ಸತ್ಯವನ್ನು ಬಹಿರಂಗವಾಗಿ ಹೇಳಲು ಯಾರೂ ಮುಂದೆ ಬರುವುದಿಲ್ಲ. ಇಲ್ಲಿ ಅನೇಕ ಕಾರಣಗಳಿವೆ. ಜಾತಿ ಕಾರಣಕ್ಕೆ ಮನಸೋತರೆ ಏನೂ ಸಾಧಿಸಲಾಗುವುದಿಲ್ಲ. ಆದರೆ, ಈ ಜಿಲ್ಲೆಗೆ ಬೇರೆ ಜಿಲ್ಲೆಯ ನಾಯಕರು ಬಂದು ಅಧಿಕಾರ ಮಾಡಿ ಹೋಗುತ್ತಾರೆ. ಅವರಿಂದ ಮಂಡ್ಯ ಅಭಿವೃದ್ಧಿ ಸಾಧಿಸಿದೆಯೇ ಎಂಬುದನ್ನು ಮುಕ್ತವಾಗಿ ವಿಶ್ಲೇಷಣೆ ಮಾಡಬೇಕು. ಮಂಡ್ಯ ಅಭಿವೃದ್ಧಿಯಲ್ಲಿ ಹಿಂದುಳಿಯಲು ಇಂತಹ ಕಾರಣಗಳಿವೆ ಎಂದು ಎಚ್‌ಡಿಕೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಮ್ಮ ಜನರೂ ಕೂಡ ಅಭಿವೃದ್ಧಿ ಕೆಲಸ ಮಾಡಿದವರನ್ನು ಕೆಲವೊಮ್ಮೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಐದು ವರ್ಷ ಗೆಲ್ಲಿಸಿ ಐದು ವರ್ಷ ಮನೆಯಲ್ಲಿ ಕೂರಿಸಿದರೆ ಪ್ರಯೋಜನವಾಗುವುದಿಲ್ಲ. ಸದಾ ಅಭಿವೃದ್ಧಿಯ ಕನಸು ಕಂಡು ಆ ನಿಟ್ಟಿನಲ್ಲಿ ಚಾಚೂ ತಪ್ಪದೇ ಕೆಲಸ ಮಾಡುವ ವ್ಯಕ್ತಿಯನ್ನು ಬೆಂಬಲಿಸಿ ಕೆಲಸ ಮಾಡಿಸಿಕೊಳ್ಳುವುದು ಉಪಯುಕ್ತ. ಹಾಗಾಗಿ ಒಂದು ಸರ್ಕಾರ ಕನಿಷ್ಟ 10 ವರ್ಷ ಆಡಳಿತ ನಡೆಸುವಂತೆ ಆಗಬೇಕು. ಅದೂ ಒಂದೇ ಪಕ್ಷದ ಸರ್ಕಾರ ಆಡಳಿತದಲ್ಲಿರಬೇಕು. ಆಗ ಮಾತ್ರ ಏನಾದರೂ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ನಗರ ಸೇರಿದಂತೆ ಇಡೀ ಜಿಲ್ಲೆಗೆ ಇನ್ನು ಮೂರೇ ವರ್ಷದಲ್ಲಿ ಹೊಸ ರೂಪ ಕೊಡುತ್ತೇವೆ, ಕಾದು ನೋಡಿ. ಅಧಿಕಾರಕ್ಕೆ ಬಂದ 15 ದಿನದಲ್ಲಿ ಮೈಷುಗರ್ ಕಾರ್ಖಾನೆಗೆ ಹೊಸ ರೂಪ ನೀಡುತ್ತೇವೆಂದು ನಾವು ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಿದ್ದೆವು. ಅದರಂತೆ ಸರ್ಕಾರ 50 ಕೋಟಿ ರೂ ಬಿಡುಗಡೆ ಮಾಡಿ ಮಾತು ಉಳಿಸಿಕೊಂಡಿದೆ. ರಾಜ್ಯದ ಯಾವ ಜಿಲ್ಲೆಗೂ ಇಷ್ಟು ಬೇಗ ಇಷ್ಟು ಮೊತ್ತದ ಅನುದಾನ ಬಿಡುಗಡೆಯಾಗಿಲ್ಲ. ಇನ್ನೊಂದು ವಾರದೊಳಗೆ ವಿಷನ್ ಮಂಡ್ಯ ಎಂಬ ತಂಡ ಕಟ್ಟಿ ನಗರ ಹಾಗೂ ಇಡೀ ಜಿಲ್ಲೆಗೆ ಅಭಿವೃದ್ಧಿಯ ರೂಪುರೇಷೆಗಳನ್ನು ತಯಾರಿಸಿ ವರದಿಯನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದ್ದೇವೆ. ಅದನ್ನು ಒಂದು ವರ್ಷದ ಅವಧಿಯಲ್ಲಿ ಸರ್ಕಾರದಿಂದ ಮಂಜೂರು ಮಾಡಿಸಿ ಕಾರ್ಯಕಗತಗೊಳಿಸುವುದು ನಿಶ್ಚಿತ. ಇದರಲ್ಲಿ ಯಾರಿಗೂ ಸಂಶಯ ಬೇಡ ಎಂದು ಖಚಿತವಾಗಿ ನುಡಿದರು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಜನಪ್ರತಿನಿಧಿಗಳು ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಚುನಾವಣೆ ಸಮಯದಲ್ಲಿ ಮಾತು ಶಕ್ತಿಯಾಗಿರಬೇಕು. ಅದೇ ರೀತಿ ಅಧಿಕಾರಕ್ಕೆ ಬಂದಾಗ ಮೌನವಾಗಿದ್ದುಕೊಂಡು ಅಭಿವೃದ್ಧಿ ಮಾಡುವ ಶಕ್ತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಸುಸಜ್ಜಿತವಾದ ಆರ್ಟ್ ಗ್ಯಾಲರಿ ಇಲ್ಲ. ಶಿಕ್ಷಣ ಆರೋಗ್ಯ ಕ್ರೀಡೆ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಯತ್ತ ಯಾರೂ ಏಕೆ ಗಮನಿಸುತ್ತಿಲ್ಲ?. ಮಂಡ್ಯದ ಕಲಾಮಂದಿರದ ಅವ್ಯವಸ್ಥೆಯನ್ನು, ರೈತ ಸಭಾಂಗಣ ಇರುವ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾರು ಏಕೆ ಮುಂದಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಪ್ರೊ.ಬಿ.ಶಂಕರೇಗೌಡ ಇತರರಿದ್ದರು.
ಇದೇ ವೇಳೆ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ ಮತ್ತು ಕದಲೂರು ಉದಯ್ ಅವರನ್ನು ಅಭಿನಂದಿಸಲಾಯಿತು.