ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಾರಿದೀಪ

10 KUDLAGI 01
ಕೂಡ್ಲಿಗಿ ಜ್ಞಾನಭಾರತಿ ಬಿಇಡಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಚಾಲನೆ ನೀಡಿದರು. ಜ್ಞಾನಭಾರತಿ ಶಿಕ್ಷಣ ವಿದ್ಯಾಲಯದ ಆಡಳಿತಾಧಿಕಾರಿ ಕೆ.ಆರ್.ರಾಜು, ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಎ.ಎಂ.ಸೋಮಶೇಖರಯ್ಯ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ, ಕಾರ್ಯದರ್ಶಿ ನಂದಿ ಬಸವರಾಜ, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಪಿ.ಶಿವರಾಜ ಇದ್ದರು.
Published on

ಕೂಡ್ಲಿಗಿ: ಯಕ ಸಂಸ್ಕೃತಿ ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಪರಂಪರೆ ಶರಣರಿಗೆ ಇದೆ ಎಂದು ಗುಡೇಕೋಟೆ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಟಿ.ಎಚ್.ಎಂ.ಶೇಖರಯ್ಯ ಹೇಳಿದರು.

ಪಟ್ಟಣದ ಜ್ಞಾನಭಾರತಿ ಬಿಇಡಿ ಕಾಲೇಜಿನಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹಪಂಕ್ತಿ ಭೋಜನದ ಮೂಲಕ ಜಾತ್ಯತೀತ ತತ್ವವನ್ನು ಜನರಿಗೆ ತಲುಪಿಸುವಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಾರಂಭಿಸಿದ ಚಳವಳಿ ಇಂದಿಗೂ ಪ್ರಸ್ತುತವಾಗಿದೆ. ಸಮಾಜದ ಭದ್ರತೆ ತಳಹದಿಯ ಮೇಲೆ ಶರಣ ಸಾಹಿತ್ಯ ನಿಂತಿದೆ. ಆರೋಗ್ಯಕರ ಸಮಾಜ ನಿರ್ಮಿಸಲು ವಚನಗಳು ದಾರಿದೀಪವಾಗಿವೆ.

ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮಸಮಾಜ ನಿರ್ಮಿಸಲು ಶರಣ ಸಾಹಿತ್ಯದ ಮೂಲಕ ಸಾಧ್ಯ. ಎಲ್ಲ ಜಾತಿಗಳಿಗೂ ಸಮಾನ ಸ್ಥಾನ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಶರಣರಿಗೆ ಸಲ್ಲುತ್ತದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಚಿಂತನೆಗಳನ್ನು 12ನೇ ಶತಮಾನದಲ್ಲಿಯೇ ಅಲ್ಲಮಪ್ರಭು, ಬಸವಣ್ಣನವರು ಸಮರ್ಥವಾಗಿ ರೂಪಿಸಿದರು ಎಂದರು.

ಕೆ.ಎಂ.ಮಂಜುನಾಥ ಸ್ಮರಣಾರ್ಥ ದತ್ತಿ ನಿಮಿತ್ತ ಉಪನ್ಯಾಸಕ ನಾಗರಾಜ ಕೊಟ್ರಪ್ಪ ಮಾತನಾಡಿ, ಆದಿಮಾನವರ ಕಾಲದಿಂದ ಕೂಡ್ಲಿಗಿ ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಜರಿಮಲೆ ಪಾಳೆಯಗಾರರು, ವೀರನ ದುರ್ಗದ ಪಾಳೆಗಾರರು ಸೇರಿದಂತೆ ಒನಕೆ ಒಬವ್ಬಳ ತವರೂರು ಗುಡೇಕೋಟೆ ಯಾಗಿರುವುದು ಈ ತಾಲೂಕಿನ ಹೆಮ್ಮೆಯ ಸಂಗತಿ.

ವೀರನ ದುರ್ಗದ ಕೋಟೆ ಪ್ರದೇಶದಲ್ಲಿ ಏಳು ಸುತ್ತಿನ ಕೋಟೆ ಇದ್ದು, ಕಾಲನ ಹೊಡೆತಕ್ಕೆ ಸಿಲುಕಿ ಈಗ ಐದು ಕೋಟೆಗಳು ಮಾತ್ರ ಇವೆ. ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಇದನ್ನು ಸಂರಕ್ಷಣೆ ಮಾಡಿ ಈ ಕುರಿತು ಇನ್ನಷ್ಟು ಬೆಳಕು ಚೆಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net