

ಅಬ್ಬಿಗೇರಿ: ಆಧುನಿಕ ಯುಗದಲ್ಲಿ ಮಾನವೀಯ ಸುಮಧುರ ಸಂಬಂಧಗಳು ಕಡಿಮೆಯಾಗುತ್ತಿವೆ. ಮರಕ್ಕೆ ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ಅದೇ ರೀತಿ ಜೀವನದಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯಲಾರವು. ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಸಂಬಂಧಗಳನ್ನು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗದಗನ ಜಿಲ್ಲೆ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಪ್ರೌಢಶಾಲಾ ಆವರಣದಲ್ಲಿ ನಿರ್ವಿುಸಿದ ಮಾನವ ಧರ್ಮ ಮಂಟಪದಲ್ಲಿ ಶನಿವಾರ ಅವರು ಶಮೀ ಪೂಜೆ ನೆರವೇರಿಸಿ ಸಿಂಹಾಸನಾರೋಹಣ ಮಾಡಿ ಶಾಂತಿ ಸಂದೇಶ ಅನುಗ್ರಹಿಸಿದರು.
ಆತ್ಮ ಶಕ್ತಿ ಇರುವವನನ್ನು ಯಾವ ದುಷ್ಟ ಶಕ್ತಿಯೂ ನಾಶಗೊಳಿಸಲಾರದು. ಬೆಂಕಿಯಲ್ಲಿ ಚಿನ್ನ ಸುಡುತ್ತಿದ್ದರೂ ಕಪ್ಪಾಗದೇ ಹೊಳೆಯುವಂತೆ ಸಜ್ಜನರು ಎಷ್ಟೇ ತೊಂದರೆಯಾದರೂ ಸ್ವಾಭಿಮಾನದಿಂದ ಬಾಳಿ ಬದುಕುತ್ತಾರೆ. ಕೆಟ್ಟವರು ಒಳ್ಳಯವರನ್ನು ನಿಂದಿಸುವುದು ಆಗಸಕ್ಕೆ ಉಗುಳಿದಂತೆ. ಆ ಉಗುಳು ಉಗಿದವನ ಮುಖದ ಮೇಲೆ ಬೀಳುತ್ತದೆಯೆ ಹೊರತು ಒಳ್ಳೆಯವರಿಗೆ ತಾಗುವುದಿಲ್ಲ. ಮನುಷ್ಯ ಜೀವನದಲ್ಲಿ ಎಷ್ಟೇ ಬೆಳೆದು ಬಲಗೊಂಡರೂ ಮೂಲವನ್ನು ಮರೆಯಬಾರದು. ಧರ್ಮ, ಪರಂಪರೆ, ಸಂಸ್ಕೃತಿ ಮಾನವನ ಅಭ್ಯುದಯಕ್ಕಾಗಿ ಮತ್ತು ಶ್ರೇಯಸ್ಸಿಗಾಗಿ ಇರುತ್ತವೆಯೆ ಹೊರತು ಅವನತಿಗಲ್ಲ. ಅರಿತು ಬಾಳುವುದರಿಂದ ಬದುಕು ಬಂಗಾರವಾಗುತ್ತದೆ.
ಹಣದಿಂದ ಎಲ್ಲವೂ ಸಿಗುವುದೆಂಬ ಭ್ರಮೆ ಇರಬಾರದು. ಹಣದಿಂದ ಔಷಧಿ ಕೊಳ್ಳಬಹುದು. ಆದರೆ, ಆರೋಗ್ಯ ಕೊಳ್ಳಲಾಗದು. ಹಣದಿಂದ ಆಹಾರ ಕೊಳ್ಳಬಹುದು. ಆದರೆ, ಪಚನಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಳ್ಳಬಹುದು. ಆದರೆ. ನಿದ್ದೆ ಕೊಳ್ಳಲಾಗದು. ಹಣದಿಂದ ಪುಸ್ತಕ ಕೊಳ್ಳಬಹುದು. ಅದರೆ, ಜ್ಞಾನ ಕೊಳ್ಳಲಾಗದು. ಹಣದಿಂದ ಮನೆ ಕೊಳ್ಳಬಹುದು, ಮನದ ಶಾಂತಿ ಕೊಳ್ಳಲಾಗದು. ಹಣದಿಂದ ವಸ್ತುವನ್ನು ಕೊಳ್ಳಬಹುದು, ಸತ್ಯವನ್ನು ಎಂದಿಗೂ ಕೊಳ್ಳಲಾಗದು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ. ಮನುಷ್ಯ ಮನುಷ್ಯನನ್ನು ಪ್ರೀತಿ ವಿಶ್ವಾಸದಿಂದ ಕಾಣುವಂತಾದರೆ ಸಮಾಜದಲ್ಲಿ ಯಾವುದೇ ಸಂಘರ್ಷಗಳು ಉಂಟಾಗಲಾರವು. ಸಹನೆ, ಸದ್ವಿನಯ ನಿನ್ನದಾದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ಅಸುರೀ ಶಕ್ತಿಗಳ ಜತೆ ಹೋರಾಡಿ ದೈವೀ ಶಕ್ತಿಗಳಿಗೆ ವಿಜಯವಾದ ದಿನವೇ ವಿಜಯ ದಶಮಿ ಆಚರಣೆಯಾಗಿದೆ. ಸ್ವಧರ್ಮದಲ್ಲಿ ನಿಷ್ಠೆ ಮತ್ತು ಪರಧರ್ಮದಲ್ಲಿ ಸಹಿಷ್ಣುತೆ ಹೊಂದಿ ಸಾಮರಸ್ಯದಿಂದ ಬಾಳಬೇಕೆಂದರು.
ಶಾಸಕ ಜಿ.ಎಸ್. ಪಾಟೀಲ ಕೃತಜ್ಞತಾ ನುಡಿ ನುಡಿದರು. ಸಿದ್ಧರಬೆಟ್ಟ ಶ್ರೀಗಳು ಸಮಾರಂಭದ ಯಶಸ್ಸಿಗಾಗಿ ಕಾರಣರಾದ ಸಮಸ್ತರಿಗೂ ದಾಸೋಹ ದಾನಿಗಳಿಗೂ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಬ್ಬಿಗೇರಿ ಹಿರೇಮಠದ-ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಗೆ ಸಂಸ್ಕೃತಿ ಸಂವರ್ಧನ ರತ್ನ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಶಾಸಕರಾದ ಜಿ.ಎಸ್. ಪಾಟೀಲ ಹಾಗೂ ದಸರಾ ಮಹೋತ್ಸವದ ಪದಾಧಿಕಾರಿಗಳು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಬಿನ್ನವತ್ತಳೆ, ಕಾಣಿಕೆ, ರೇಷ್ಮೆ ಶಾಲು, ಫಲ, ಪುಷ್ಪ, ತಾಂಬೂಲ ಸಮರ್ಪಿಸಿ ಗೌರವಿಸಿದರು.
ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ವಾರ್ತಾ ಕಾರ್ಯದರ್ಶಿ ಡಾ. ಗುರುಮೂರ್ತಿ ಯರಗಂಬಳಿಮಠ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಪ್ರಮುಖರಾದ ಡಾ. ಗುರುಪಾದಯ್ಯ ಸಾಲಿಮಠ, ಶಾಂತಾ ಆನಂದ, ವೀರೇಶ ಕಿತ್ತೂರ, ಬಸವರಾಜ ವೀರಾಪುರ, ಬಾಬುಗೌಡ್ರ ಪಾಟೀಲ, ವರ್ಮಪ್ಪ ಹನಮನಾಳ, ಮಂಜುನಾಥ ಅಂಗಡಿ, ಅಂದಪ್ಪ ವೀರಾಪುರ, ಬಸವರಾಜ ಪಲ್ಲೇದ, ಮಲ್ಲಿಕಾರ್ಜುನ ಹರ್ಲಾಪುರ, ಸುರೇಶ ನಾಯಕ, ಶಿವಪ್ಪ ಶಿದ್ನೇಕೊಪ್ಪ, ಗುರಣ್ಣ ಅವರೆಡ್ಡಿ, ಸೋಮನಗೌಡ ಕಣವಿ, ಭೀಮಣ್ಣ ಕಂಬಳಿ ಇದ್ದರು. ವೀರಯ್ಯ ಸೋಮನಕಟ್ಟಿಮಠ ಸ್ವಾಗತಿಸಿದರು.