ಅದ್ದೂರಿಯಾಗಲಿದೆ ಅಬ್ಬಿಗೇರಿ ದಸರಾ ಧರ್ಮ ಸಮ್ಮೇಳನ

30 NRL STORY
Published on

ವಿಜಯವಾಣಿ ಸುದ್ದಿಜಾಲ ನರೇಗಲ್ಲ
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ದಸರಾ ಧರ್ಮ ಸಮ್ಮೇಳನವನ್ನು ಅಬ್ಬಿಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳುವ ಮಹದಾಸೆಯನ್ನು ಲಿಂ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೊಂದಿದ್ದರು. ಅದರ ಫಲವಾಗಿ ಪ್ರಸಕ್ತ ವರ್ಷದ ದಸರಾ ದರ್ಬಾರ್ ಆಯೋಜಿಸಲಾಗಿದೆ. ಶ್ರೀಗಳ ಮಹಾದಾಸೆ ನನಸಾಗುತ್ತಿದೆ ಎಂದು ರೋಣ ಶಾಸಕ ಹಾಗೂ ದಸರಾ ಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಈ ಹಿಂದೆ ಜರುಗಿರುವ ಎಲ್ಲ ದಸರಾ ದರ್ಬಾರ್‌ಗಳಿಗಿಂತ ಹೆಚ್ಚಿನ ವೈಭವದಿಂದ ಅಬ್ಬಿಗೇರಿಯ ಸಮ್ಮೇಳನ ಆಯೋಜಿಸಲಾಗುತ್ತಿದೆ. ಮಳೆಯ ರಕ್ಷಣೆಗಾಗಿ ಜರ್ಮನ್ ತಂತ್ರಜ್ಞಾನದ ಪೆಂಡಾಲ್ ಹಾಕಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ನಾಡಿನ ಭಕ್ತಾದಿಗಳಿಗೆ ಸಕಲ ರೀತಿಯ ಸವಲತ್ತುಗಳನ್ನು ಕಲ್ಪಸಲಾಗುತ್ತಿದೆ. ಪ್ರತಿನಿತ್ಯ ತರಹೇವಾರಿ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಈ ಭಾಗದಲ್ಲಿ ನಡೆಯುವ ಅತ್ಯಂತ ಅದ್ದೂರಿ ಹಾಗೂ ಶ್ರೇಷ್ಠವಾದ ಸಮಾರಂಭ ಎಂದರೆ ಅದು ದಸರಾ ದರ್ಬಾರ್. ಇದರಲ್ಲಿ ಭಾಗಿಯಾಗುವುದರಿಂದ ಮನಸಿಗೆ ನೆಮ್ಮದಿ ಲಭ್ಯವಾಗುತ್ತದೆ. ಅ. 2ರಂದು ಜಗದ್ಗುರುಗಳ ಪುರಪ್ರವೇಶದಿಂದ ಪ್ರಾರಂಭವಾಗುವ ಸಮ್ಮೇಳನ 9 ದಿನಗಳ ಕಾಲ ವೈಭವೋಪೇತವಾಗಿ ಜರುಗಲಿದೆ. ಪ್ರತಿ ನಿತ್ಯ ಬೆಳಗ್ಗೆ ಇಷ್ಟಲಿಂಗ ಪೂಜೆ ನೋಡಲು ಎರಡು ಕಣ್ಣು ಸಾಲದು. ಇಷ್ಟಲಿಂಗದ ಧಾರಣೆ ಮತ್ತು ಪೂಜೆಯನ್ನು ಮಾಡಲಾಗುತ್ತದೆ ಎಂದರು.
ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಂಭಾಪುರಿ ಪೀಠ ಪರಂಪರೆಯ ಪೂರ್ವದ ಜಗದ್ಗುರುಗಳು ಶರನ್ನವರಾತ್ರಿ ದಸರಾ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾ ಬಂದಿದ್ದಾರೆ. ಈಗಿನ ಜಗದ್ಗುರುಗಳವರ ಕಾಲದಲ್ಲಿ ಇದೊಂದು ನಾಡ ಹಬ್ಬವಾಗಿ ಪರಿಣಮಿಸಿದೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಅಭಿರುಚಿಯನ್ನು ಸಂವರ್ಧಿಸುವ, ಆಧ್ಯಾತ್ಮಿಕ ತಳಹದಿಯ ಮೇಲೆ ಸಾತ್ವಿಕ ಸತ್ವಶೀಲ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ನವಮನ್ವಂತರದಲ್ಲಿ ಅದ್ಭುತ ಕಾರ್ಯಗಳನ್ನು ವಿಸ್ತಾರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಅಬ್ಬಿಗೇರಿ ಗ್ರಾಮದಲ್ಲಿ ಜರುಗಲಿದೆ. ಶ್ರೀ ಅನ್ನದಾನೇಶ್ವರ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸುವ ಮಾನವ ಧರ್ಮ ಮಂಟಪದ ಸಭಾಂಗಣದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ವಿವರಿಸಿದರು.
ವಿವಿಧ ಭಾಗಗಳ ಶಿವಾಚಾರ್ಯರು, ಸಾಹಿತಿಗಳು, ವಿದ್ವಾಂಸರು, ಸಮಾಜ ಚಿಂತಕರು, ಕವಿ ಕಲಾವಿದರು ಮತ್ತು ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಯಶಸ್ಸಿಗಾಗಿ ಭಕ್ತರ ಸೇವೆ ಸಹಕಾರ ಅವಶ್ಯ. ಸರ್ವರೂ ತ್ರಿಕರಣಪೂರ್ವಕ ಸೇವೆ ಸಲ್ಲಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಕೃಪಾ ಕಾರುಣ್ಯಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಠಾಣಾ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ನರಸಾಪುರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಇಳಕಲ್‌ನ ಪ್ರವಚನಾಕಾರ ಅನ್ನದಾನ ಶಾಸ್ತ್ರೀ, ಮಂಜುನಾಥ ಅಂಗಡಿ, ಬಾಬುಗೌಡ ಪಾಟೀಲ, ಎ.ವಿ. ವೀರಾಪೂರ, ಸುರೇಶ ಸಿದ್ನೆಕೊಪ್ಪ, ಡಾ.ಆರ್.ಕೆ. ಗಚ್ಚಿನಮಠ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ಪಲ್ಲೇದ, ವಿಜಯಕುಮಾರ ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net