

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಪ್ರವಾಸಿಗರ ನೆಚ್ಚಿನ ತಾಣವಾದ ಅಬ್ಬಿಫಾಲ್ಸ್‌ನ ಟಿಕೆಟ್ ಕೌಂಟರ್‌ಗೆ ಜಾಗದ ಮಾಲೀಕರು ಬೀಗ ಜಡಿದಿದ್ದಾರೆ.
ಹೌದು.. ಮಡಿಕೇರಿ ತಾಲೂಕಿನ ನಿವಾಸಿ ನೆರವಂಡ ಬಿ.ಪಾರ್ವತಿ ನಾಣಯ್ಯ ಮತ್ತು ಮಕ್ಕಳು ಅಬ್ಬಿಜಲಪಾತ(ಅಬಿಫಾಲ್ಸ್)ವನ್ನು ಪ್ರವಾಸಿಗರ ವೀಕ್ಷಣೆಗಾಗಿ ಜಾಗ ಬಿಟ್ಟುಕೊಟ್ಟಿದ್ದರು. ಈ ಸಂದರ್ಭದಲ್ಲಿ ಯಾವುದೇ ಟಿಕೆಟ್ ಕೌಂಟರ್ ಅಥವಾ ಪ್ರವಾಸಿಗರಿಗೆ ಟಿಕೆಟ್ ನಿಗದಿ ಮಾಡದಂತೆ ಪತ್ರದಲ್ಲಿ ಸೂಚಿಸಲಾಗಿತ್ತು. ಆದರೆ, ಪಂಚಾಯಿತಿ ವತಿಯಿಂದ ಟಿಕೆಟ್ ಕೌಂಟರ್ ಆರಂಭಿಸಿ ಒಬ್ಬರಿಗೆ ರೂ.೧೦ರಂತೆ ನಿಗದಿ ಮಾಡಿ, ಟಿಕೇಟ್ ನೀಡಿದೆ. ಮಾಹಿತಿ ತಿಳಿದ ಜಾಗದ ಮಾಲೀಕರು ಭಾನುವಾರ ಸ್ಥಳಕ್ಕೆ ಆಗಮಿಸಿ ಟಿಕೆಟ್ ಕೌಂಟರ್‌ರನ್ನು ಮುಚ್ಚಿಸಿ, ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಿದರು.
ದಾನ ಮಾಡಿಲ್ಲ: ಅಬ್ಬಿಫಾಲ್ಸ್‌ಗೆ ತೆರಳುವ ಜಾಗವನ್ನು ನಾವು ದಾನ ಮಾಡಿಲ್ಲ. ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಅವಕಾಶ ನೀಡುವ ಸಲುವಾಗಿ ಸ್ಥಳ ಬಿಟ್ಟುಕೊಡಲಾಗಿದೆ. ಈ ಮೊದಲು ಕಾಲು ದಾರಿಯಿತ್ತು. ನಂತರ ೫ ಅಡಿ ಜಾಗದಲ್ಲಿ ಕಾಂಕ್ರಿಟ್ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ, ಇಕ್ಕೆಲಗಳಲ್ಲಿ ನೆಟ್‌ನಿಂದ ಗ್ರಿಲ್ಸ್ ಅಳವಡಿಸಲಾಗಿದೆ. ಈ ಸಂದರ್ಭ ನಾವು ಯಾವುದೇ ರೀತಿಯ ಚಕಾರೆತ್ತಲಿಲ್ಲ. ಆದರೆ, ಇಂದು ಪ್ರವಾಸಿಗರ ವೀಕ್ಷಣೆಗೆ ಬಿಟ್ಟುಕೊಟ್ಟ ಜಾಗವನ್ನು ದಾನ ಮಾಡಿದ ರೀತಿಯಲ್ಲಿ ಸ್ಥಳ ದಾನಿಗಳು ಎಂದು ನಾಮಫಲಕ ಹಾಕಿದ್ದಾರೆ. ಇದು ಯಾವ ನ್ಯಾಯ. ಅಲ್ಲದೇ, ನಮ್ಮ ಜಾಗದ ಮುಂಭಾಗ ಹೆಚ್ಚಿನ ಕೌಂಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸಂದರ್ಭ ನಮ್ಮ ಅನುಮತಿ ಪಡೆಯಲಿಲ್ಲ. ಎಲ್ಲವು ಇವರಿಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡು ಹೋಗಲಾಗಿದೆ ಎಂದು ಬಿ.ಪಾರ್ವತಿ ನಾಣಯ್ಯರವರ ಪುತ್ರಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ಎನ್.ಇಂದಿರಾ ದೂರಿದರು.
ಟೆಂಡರ್ ಕರೆದರೆ ಕೋರ್ಟ್ ಮೆಟ್ಟಿಲೇರುತ್ತೇನೆ!: ಅಬ್ಬಿಪಾಲ್ಸ್ ಒಳಭಾಗದಲ್ಲಿ ಹೂವಿನಕುಂಡ, ಸೇರಿದಂತೆ ಇತ್ಯಾದಿ ಅಭಿವೃದ್ಧಿಗೆ ಮುಂದಾಗುವ ಮಾಹಿತಿ ಲಭ್ಯವಾಗಿದೆ. ಈಗಿರುವಂತೆ ಟಿಕೇಟ್ ನೀಡದೇ ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ ಎಂದು ಇಂದಿರಾ ಎಚ್ಚರಿಸಿದರು.
ಡಿಸಿ ಜತೆ ಚರ್ಚೆ: ಈ ಹಿಂದೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸಭೆ ನಡೆಸುವ ಸಂದರ್ಭ ತಿಳಿಸಲಾಗುವುದು ಎಂದು ಹೇಳಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೂರವಾಣಿ ಕರೆ ಸ್ವೀಕರಿಸಲ್ಲ: ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎರೆಡು ತಿಂಗಳಾಗಿದೆ. ಸಭೆ ಕರೆಯಲಾಗುವುದು ಎಂದು ತಿಳಿಸಿದ್ದರು. ಆದರೆ, ಯಾವುದೇ ಕ್ರಮ ಆಗಿಲ್ಲ. ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಭಾನುವಾರದಿಂದ ಟಿಕೆಟ್ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಭಾನುವಾರ ಬೆಳಗ್ಗೆ ಸ್ಥಳಕ್ಕೆ ಬಂದಾಗ ಟೀಕೆಟ್ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಟಿಕೆಟ್ ನೀಡದಂತೆ ತಿಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಕಂಡು ಬಂದಲ್ಲಿ ಅಬ್ಬಿಪಾಲ್ಸ್ ಗೇಟ್‌ಗೆ ಬೀಗ ಹಾಕಲಾಗುವುದು ಎಂದು ಇಂದಿರಾ ಎಚ್ಚರಿಸಿದರು.
ಈ ಸಂದರ್ಭ ಜಾಗದ ಮಾಲೀಕ ಬಿ.ಪಾರ್ವತಿ ನಾಣಯ್ಯರವರ ಪುತ್ರಿಯರಾದ ಬಾನು, ಮೇರಿ ನಾಣಯ್ಯ ಹಾಗೂ ಮೊಮ್ಮಕ್ಕಳಾದ ಲಹರ ಗಣಪತಿ, ಪೊನ್ನಣ್ಣ ಇದ್ದರು.
ಟಿಕೆಟ್ ಸಿಬ್ಬಂದಿಗೆ ತರಾಟೆ
ಟೀಕೆಟ್ ನೀಡುತ್ತಿದ್ದ ಕೌಂಟರ್ ಸಿಬ್ಬಂದಿಯನ್ನು ಜಾಗದ ಮಾಲೀಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಸಿಬ್ಬಂದಿಯಾಗಿ ನೇಮಕ ಮಾಡಿದವರನ್ನು ಸ್ಥಳಕ್ಕೆ ಬರುವಂತೆ ಒತ್ತಾಯ ಮಾಡಿದರು. ಇದೇ ಸಂದರ್ಭದಲ್ಲಿ ಸಿಬ್ಬಂದಿಯನ್ನು ಕೌಂಟರ್‌ನಿಂದ ಖಾಲಿ ಮಾಡಿಸಿ ಬೀಗ ಜಡಿದರು. ಜತೆಗೆ ಟಿಕೇಟ್ ನೀಡುತ್ತಿದ್ದ ಸ್ಥಳಕ್ಕೆ ಬೋರ್ಡ್‌ಗಳನ್ನು ಅಳವಡಿಸಿದರು.
ತೋಟ ಕೆಲಸಕ್ಕೆ ತೊಂದರೆ
ತೋಟಕ್ಕೆ ಗೊಬ್ಬರ ಅಥವಾ ಇತರೆ ಯಾವುದೇ ವಸ್ತುಗಳ ಸಾಗಟಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಪಂಚಾಯಿತಿ ವತಿಯಿಂದ ಮುಂಭಾಗ ಬೃಹಧಾಕಾರದ ಗೇಟ್ ನಿರ್ಮಾಣ ಮಾಡಲಾಗಿದ್ದು, ವಸ್ತುಗಳ ಸಾಗಟಕ್ಕೆ ತೊಂದರೆಯಾಗಿದೆ. ಮುಖ್ಯ ದ್ವಾರದ ಮಧ್ಯ ಗೇಟ್‌ನ ಬೀಗ ನೀಡದೇ ಸತಾಯಿಸುತ್ತಾರೆ. ನಮ್ಮ ತೋಟದ ಕೆಲಸ ಮಾಡಿಸಲು ನಾವು ಅವರನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಒಮ್ಮೆ ಹಾಕಿದ ಬೀಗ ಮಾಯಾ
ಪಾತ್‌ವೇ ಯಲ್ಲಿ ಗ್ರಿಲ್ಸ್ ಅಳವಡಿಸಲಾಗಿದೆ. ಒಂದೆರಡು ಗ್ರಿಲ್‌ಗಳು ಹಾಳಾಗಿದೆ. ಇದರೊಂದಿಗೆ ತೋಟಕ್ಕೆ ತೆರಳಲು ಗೇಟ್ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಹಾಕಿದ ಬೀಗ ಮಾತ್ರ ಮಾಯವಾಗುತ್ತಿದೆ. ಜತೆಗೆ ತೋಟದ ಒಳಭಾಗದಲ್ಲಿ ಮೂಟೆ ಲೆಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತುಂಬಿಸಿಡಲಾಗಿದ್ದು, ಮಾಲೀಕರು ತೋಟಕ್ಕೆ ಬಂದ ಸಂದರ್ಭ ಬೆಳಕಿಗೆ ಬಂದಿದೆ. ಪ್ರವಾಸಿಗರಿಗಾಗಿ ಬಿಟ್ಟುಕೊಟ್ಟ ಪರಿಣಾಮ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಪ್ಲಾಸ್ಟಿಕ್ ವಸ್ತುಗಳು ತೋಟದ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳಕ್ಕೆ ಪೊಲೀಸರ ಭೇಟಿ
ಅಬ್ಬಿಫಾಲ್ಸ್ ಪ್ರವಾಸಿತಾಣಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿದ್ದರು. ಈ ಸಂದರ್ಭ ಅಬ್ಬಿಪಾಲ್ಸ್‌ನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಉಪ್ಪಳಿಕೆರವರಲ್ಲಿ ವಿವರಿಸಿ, ಈ ಹಿಂದೆ ಇದ್ದ ಎಸ್‌ಪಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪರವರಿಗೆ ದೂರು ನೀಡಿರುವುದಾಗಿ ತಿಳಿಸಿದರು. ಅವರು ವರ್ಗಾವಣೆಯಾಗಿದ್ದು, ದೂರನ್ನು ಪರಿಶೀಲಿಸಲಾಗುವುದು ಉಮೇಶ್ ತಿಳಿಸಿದರು.
ಕೋಟ್
ಅಬ್ಬಿಫಾಲ್ಸ್ ಇರುವ ಜಾಗ ನಮ್ಮ ಖಾಸಗಿ ಆಸ್ತಿ. ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗಾಗಿ ಜಲಪಾತ ವೀಕ್ಷಣೆಗೆ ಬಿಟ್ಟುಕೊಟ್ಟಿದ್ದೇವೆ. ಆದರೆ, ಕಾನೂನು ಬಾಹಿರವಾಗಿ ನಮ್ಮ ಆಸ್ತಿಗೆ ಬೀಗ ಹಾಕಿ ನಾವು ಅವರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರಿಗೆ ತೊಂದರೆ ಕೊಡುವುದಿಲ್ಲ. ಅವರು ಎಂದಿನಂತೆ ಬಂದು ಉಚಿತವಾಗಿ ವೀಕ್ಷಣೆ ಮಾಡಿ ತೆರಳಬಹುದು. ದಯವಿಟ್ಟು ಪ್ಲಾಸ್ಟಿಕ್ ಬಳಸಿ ತೋಟಕ್ಕೆ ಎಸೆಯಬೇಡಿ.
ಎನ್.ಎನ್.ಇಂದಿರಾ, ಜಾಗದ ಮಾಲೀಕರ ಪುತ್ರಿ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ
ಈ ಹಿಂದೆ ಟಿಕೆಟ್ ಇರಲಿಲ್ಲ. ಇಂದು ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ತಿಯನ್ನು ಬಿಟ್ಟುಕೊಟ್ಟಿರುವುದು ದೊಡ್ಡ ವಿಚಾರ. ಆದರೆ, ಸಂಬಂದಪಟ್ಟವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೇಸರದ ವಿಷಯವಾಗಿದೆ. ಉಚಿತವಾಗಿ ಬಿಟ್ಟುಕೊಟ್ಟಿರುವುದುನ್ನು ಕಾಪಾಡಿಕೊಂಡು ಹೋಗುವ ಕೆಲಸವಾಗಬೇಕು.
ಪ್ರಮೋದ್, ಮಡಿಕೇರಿ ನಿವಾಸಿ
ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಾಡಿದಂತೆ ಟಿಕೆಟ್ ಕೌಂಟರ್ ಆರಂಭ ಮಾಡಿದ್ದೇವೆ. ಟಿಕೆಟ್ ಆರಂಭಕ್ಕೂ ಮುಂಚಿತವಾಗಿ ಪ್ರಕಟಣೆ ನೀಡಲಾಗಿತ್ತು. ಇದಕ್ಕೆ ಉತ್ತರ ಇರಲಿಲ್ಲ. ಪಿಡಿಒ ಬಂದ ನಂತರ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು.
ಡೀನ್ ಬೋಪಣ್ಣ, ಅಧ್ಯಕ್ಷರು, ಕೆ.ನಿಡುಗಣೆ ಪಂಚಾಯಿತಿ