ಧುಮ್ಮುಕ್ಕುತ್ತಿರುವ ಅಬ್ಬಿಫಾಲ್ಸ್

abbifalls
Published on

ಮಡಿಕೇರಿ:

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ ಮೈತುಂಬಿಕೊAಡಿದೆ. ಸಾಮಾನ್ಯವಾಗಿ ಜೂನ್ ಮಧ್ಯಭಾಗದಲ್ಲಿ ಭೋರ್ಗರೆಯುತ್ತಿದ್ದ ಅಬ್ಬಿ ಫಾಲ್ಸ್ ಈ ವರ್ಷ ಮೇ ತಿಂಗಳಿನಲ್ಲೇ ಸೌದರ್ಯ ಹೆಚ್ಚಿಸಿಕೊಂಡು ಪ್ರವಾಸಿಗರನ್ನು ತನ್ನೆಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.

ಸುರಿಯುವ ಮಳೆ, ಚುಮು ಚುಮು ಚಳಿ, ಮಂಜು ಕವಿದ ವಾತಾವರಣ ಮಧ್ಯೆ ಜಿಲ್ಲೆ ಸೇರಿದಂತೆ ವಿವಿಧೆಡೆಯ ಪ್ರವಾಸಿಗರು ಅಬ್ಬಿಫಾಲ್ಸ್ ಕಡೆಗೆ ಆಗಮಿಸುತ್ತಿದ್ದು, ತುಂಬಿಕೊAಡಿರುವ ಜಲಪಾತದ ಸೌಂದರ್ಯ ಸವಿಯುತ್ತಿದ್ದಾರೆ. ನಸುಕೆಂಪು ಬಣ್ಣದಿಂದ ಧುಮ್ಮುಕ್ಕುತ್ತಿರುವ ಜಲಧಾರೆ ಆಕರ್ಷಣೆಯ ಕೇಂದ್ರಬಿAದುವಾಗಿದೆ.

ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರು ಕಾಫಿ ತೋಟಗಳ ಹಸಿರಿನ ಮಧ್ಯೆ ಇರುವ ಈ ಸೌಂದರ್ಯ ಸಿರಿಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿಲ್ಲದೇ ಬಣಗುಡುವ ಅಬ್ಬಿಫಾಲ್ಸ್ ಮಳೆಗಾಲದಲ್ಲಿ ತನ್ನ ನೈಜ ಸೌಂದರ್ಯವನ್ನು ತೆರೆದುಕೊಂಡು ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ. ಆದರೆ ಈ ಬೇಸಿಗೆಯಲ್ಲಿ ಮಳೆ ಇದ್ದಕಾರಣ ಅಬ್ಬಿಫಾಲ್ಸ್ನಲ್ಲಿ ಜೀವ ಕಳೆ ಇತ್ತು.

80 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಕಣ್ಣಿಗೆ ಆನಂದ ಕೊಡುವುದಲ್ಲದೆ ಮನಸ್ಸಿಗೂ ಉತ್ಸಾಹ ತುಂಬುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಎಲ್ಲ ನೋವುಗಳನ್ನು ಮರೆತು ಪ್ರಕೃತಿಯ ಮಡಿಲಲ್ಲಿ ಮೈಮರೆಯುತ್ತಾರೆ. ಜಲಧಾರೆಯ ಮೋಹಕ ಸೆಳೆತ ಒಂದೆಡೆಯಾದರೆ, ಮಂಜಿನ ಸ್ಪರ್ಶ, ಮೈಗೆ ಸೋಕುವ ತಂಗಾಳಿ ಮನಸ್ಸಿಗೆ ಹಿತನೀಡುತ್ತೆ.

ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ಮಳೆಗಾಲದಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತದೆ. ಅದಕ್ಕಾಗಿಯೇ ವಾರಾಂತ್ಯಗಳಲ್ಲಿ ಜಲಪಾತನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕಪ್ಪು ಕಲ್ಲುಗಳ ನಡುವೆ ಧರೆಗಿಳಿಯುವ ಜಲಪಾತದ ದೃಶ್ಯವನ್ನು ಸೆರೆಹಿಡಿಯುವ ಪ್ರವಾಸಿಗರು ತಮ್ಮ ಪ್ರವಾಸದ ನೆನಪನ್ನ ಹಸಿರಾಗಿಡಲು ಸೆಲ್ಫಿಗಳ ಮೊರೆ ಹೋಗುವುದು ಇಲ್ಲಿ ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net