ಅಬ್ಬಯ್ಯ-ಮುತ್ತಣ್ಣವರ ವಾಗ್ಯುದ್ಧ

h6-Muttanna 1
Published on

ಹುಬ್ಬಳ್ಳಿ: ಮಹಿಳಾ ಭವನ ನಿರ್ವಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಮಧ್ಯೆ ವಾಗ್ಯುದ್ಧ, ಜೈಕಾರ-ಧಿಕ್ಕಾರಕ್ಕೆ ಕಾರಣವಾದ ಘಟನೆ ನಗರದ ವೀರಾಪುರ ಓಣಿಯಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ನಡೆಯಿತು.

ಮಹಿಳಾ ಭವನ ನಿರ್ವಿುಸಲು ಒಪ್ಪಂದವಾಗಿದೆ. ಅದರಂತೆ ಈ ಕಟ್ಟಡದಲ್ಲಿ ಮಹಿಳಾ ಭವನಕ್ಕೆ ಕೊಠಡಿ ಮೀಸಲಿಡಬೇಕು ಎಂದು ಮುತ್ತಣ್ಣವರ ಆಗ್ರಹಿಸಿದರು. ಇದು ತಮ್ಮ ನಿರ್ಧಾರ ಅಲ್ಲ. ರೈತರು ಇಲ್ಲಿ ಜಾಗ ಕೊಟ್ಟಿದ್ದಾರೆ. ಅದರಂತೆ ರೈತರಿಗೆ ಕೊಠಡಿ ಮೀಸಲಿಡಲಾಗಿದೆ ಎಂದು ಅಬ್ಬಯ್ಯ ಗದರಿದರು. ಶಿವಾನಂದ ಅವರನ್ನು ಇಲ್ಲಿಂದ ಹೊರ ಹಾಕಿ ಎಂದೂ ಶಾಸಕರು ಕೋಪದಿಂದ ಹೇಳಿದರು. ಇದರಿಂದ ಕೈ ಕಾರ್ಯಕರ್ತರು ಮತ್ತು ಶಿವಾನಂದ ಆಪ್ತರ ಮಧ್ಯೆ ಜೈಕಾರ-ಧಿಕ್ಕಾರ ಘೊಷಣೆ ವಿನಿಮಯವಾದವು.ಮಾತಿನ ಚಕಮಕಿಯೂ ತಾರಕಕ್ಕೇರಿತು. ಸಚಿವದ್ವಯರು ಮೂಕ ಪ್ರೇಕ್ಷಕರಾಗಿದ್ದರು.

ನಂತರ ಮಾತು ಪ್ರಾರಂಭಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಿವಾನಂದ ಮುತ್ತಣ್ಣವರ ತಲೆ ಗರಂ ಮಾಡಿಕೊಳ್ಳಬಾರದು. ತಲೆ ಗರಂ ಆದರೆ ಹೃದಯ ತಣ್ಣಗಾಗುತ್ತದೆ. ತಲೆ ತಣ್ಣಗಿದ್ದರೆ ಹೃದಯ ಗರಂ ಆಗುತ್ತದೆ ಎಂದು ಮಾರ್ವಿುಕವಾಗಿ ಹೇಳಿದರು. ಮೇಲ್ಮಹಡಿ ನಿರ್ವಿುಸಿ ಮಹಿಳಾ ಭವನ ಮಾಡಿ, ಅನುದಾನ ಸಾಲದಿದ್ದರೆ ನನ್ನ ಕೇಳಿ… ಎಂದು ಪಾಲಿಕೆ ಆಯುಕ್ತರಿಗೆ ಜೋಶಿ ಸೂಚಿಸುವ ಮೂಲಕ ವಾತಾವರಣ ತಿಳಿಗೊಳಿಸಿದರು.

ಸೇವಾ ಕೇಂದ್ರ ಉದ್ಘಾಟ ನೆ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನೂತನವಾಗಿ ನಿರ್ವಿುಸಿರುವ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಹಾಗೂ ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಟ್ ವಿತರಿಸಿ ಮಾತನಾಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಚುನಾವಣೆ ಬಂದಾಗ ರಾಜಕಾರಣ, ಪಕ್ಷ ಇದ್ದೇ ಇರುತ್ತದೆ. ಅದರ ಮಧ್ಯೆ ಅಭಿವೃದ್ಧಿ ಬಗೆಗೆ ಎಲ್ಲರೂ ಮಾತನಾಡೋಣ. ಇನ್ನೊಂದು ಅಂತಸ್ತಿನ ಕಟ್ಟಡ ನಿರ್ವಿುಸಿ ಮಹಿಳಾ ಭವನಕ್ಕೆ ಮೀಸಲಿಡೋಣ. ಬಂಕಾಪುರ ಚೌಕದಿಂದ ಚನ್ನಮ್ಮ ವೃತ್ತದವರೆಗೆ ಚುತಷ್ಪಥ ರಸ್ತೆ ನಿರ್ವಿುಸಲಾಗಿದೆ. ನೂತನ ಫ್ಲೈ ಓವರ್ ನಿರ್ಮಾಣ ವೇಳೆ ಬಂಕಾಪುರ ಚೌಕದವರೆಗೂ ಮೇಲ್ಸೇತುವೆ ವಿಸ್ತರಿಸಲಾಗುವುದು ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 2 ಕೋಟಿ ರೂ. ಅನುದಾನದಲ್ಲಿ ಕಟ್ಟಡ ನಿರ್ವಿುಸಲಾಗಿದೆ. ಇದರಲ್ಲಿ ಕರ್ನಾಟಕ ಒನ್, ಗ್ರಾಮಲೆಕ್ಕಾಧಿಕಾರಿ ಕಾರ್ಯಾಲಯ ಹಾಗೂ ರೈತ ಭವನಗಳು ಕಾರ್ಯನಿರ್ವಹಿಸಲಿವೆ. ಸರ್ಕಾರಿ ಜಾಗ ಮತ್ತು ಕಟ್ಟಡಗಳು ಖಾಸಗಿಯವರ ಕೈ ಸೇರಬಾರದು ಎಂದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅರವಿಂದ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಪರ್ವತಪ್ಪ ಬೆಳಗಣ್ಣವರ ಇತರರು ಇದ್ದರು.

*ಜಗಳದ ಮಧ್ಯೆ ಬರಲಿದೆ ಮಹಿಳಾ ಭವನ: ಇಬ್ಬರ ಜಗಳದ ಮಧ್ಯೆ ಮಹಿಳಾ ಭವನ ತಲೆ ಎತ್ತಲಿರುವುದು ಸಂತೋಷ ವಿಷಯ. ಶಿವಾನಂದ ಮುತ್ತಣ್ಣವರ ಎತ್ತಿದ ವಿಷಯವನ್ನುಪ್ರಸಾದ ಅಬ್ಬಯ್ಯ ಕಡೆಗಣಿಸಿದರು. ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೇಲಂತಸ್ತು ನಿರ್ವಿುಸಿ ಮಹಿಳಾ ಭವನ ನಿರ್ವಣವಾಗಲಿ ಎಂದಿರುವುದು ಮತ್ತಷ್ಟು ಖುಷಿಯ ವಿಚಾರ ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net