

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಪೌರಕಾರ್ವಿುಕರು, ಗುತ್ತಿಗೆ ಆಟೋ ಟಿಪ್ಪರ್ ಚಾಲಕರಿಗೆ ಹಾಗೂ ಯುಜಿಡಿ ನಿರ್ವಹಣಾ ವಾಹನ ಚಾಲಕರನ್ನು ನೇರವೇತನ ಮತ್ತು ನೇರ ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕರ್ನಾಟಕ ಪ್ರಗತಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಮತ್ತು ಸಹಾಯಕರ ಸಂಘದ ನೇತೃತ್ವದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಗುತ್ತಿಗೆ ಪೌರ ಕಾರ್ವಿುಕರು, ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ಗುತ್ತಿಗೆ ಪೌರಕಾರ್ವಿುಕರಿಗೆ ನೇರವೇತನ ನೀಡಿ ಆದೇಶ ಹೊರಡಿಸಿದ್ದರು. ಅಂದು ಪಾಲಿಕೆಯ 1,001 ಗುತ್ತಿಗೆ ಪೌರ ಕಾರ್ವಿುರಿಗೆ ನೇರವೇತನ ನೀಡಲಾಯಿತು. ನಂತರ ಬಂದ ಬಿಜೆಪಿ ಸರ್ಕಾರ ಗುತ್ತಿಗೆ ಪೌರಕಾರ್ವಿುಕರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಪೌರ ಕಾರ್ವಿುಕರು ಬೇಸರ ವ್ಯಕ್ತಪಡಿಸಿದರು.
ಇಂದು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಪೌರ ಕಾರ್ವಿುಕರ ಸಮಸ್ಯೆಗಳ ಪರಿಹಾರ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರಂತವಾಗಿ ಸಂಪರ್ಕದಲ್ಲಿದ್ದೇನೆ. ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.
ಗುತ್ತಿಗೆ ಪೌರ ಕಾರ್ವಿುಕರ ಸಮಸ್ಯೆಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಶಾಸಕರು ಸೂಚಿಸಿದರು.
ಮುಖಂಡ ಶ್ರೀನಿವಾಸ ಬೆಳದಡಿ, ಸಂಘಟನೆ ಪ್ರಮುಖರಾದ ಚಂದ್ರಕಾಂತ ಶಿರಗುಂಪಿ ಹಾಗೂ ಇತರರು ಇದ್ದರು.