

ತುಮಕೂರು : ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ಹೆಚ್ಚು ಪ್ರಸರಣವಿರುವ ದಿನಪತ್ರಿಕೆ ಹಾಗೂ ಟಿವಿ ಮಾಧ್ಯಮದಲ್ಲಿ ಸಾರ್ವಜನಿಕರಿಗೆ ಕಡ್ಡಾಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣಗಳ ಬಗ್ಗೆ 3 ಬೇರೆ ಬೇರೆ ದಿನಾಂಕಗಳಲ್ಲಿ ಫಾರ್ಮೆಟ್ ಸಿ-1 ಅನೆಕ್ಷರ್ 43ರಲ್ಲಿ ಪ್ರಚಾರ ಮಾಡಬೇಕು. ಅಭ್ಯರ್ಥಿಗಳು ದಿನಪತ್ರಿಕೆ, ಟಿವಿ ಚಾನಲ್‌ಗಳಲ್ಲಿ ಪ್ರಕಟಿಸಿರುವ ಮಾಹಿತಿಯ ದಾಖಲೆಗಳನ್ನು ಚುನಾವಣೆ ಮುಗಿದ ನಂತರ ನಮೂನೆ ಸಿ-4ರಲ್ಲಿ ಹಾಗೂ ರಾಜಕೀಯ ಪಕ್ಷಗಳು ದಿನ ಪತ್ರಿಕೆ, ಪಕ್ಷದ ವೆಬ್‌ಸೈಟ್ ಹಾಗೂ ಟಿವಿ ಚಾನಲ್‌ಗಳಲ್ಲಿ ಪ್ರಕಟಿಸಿರುವ ಮಾಹಿತಿಯ ದಾಖಲೆಗಳನ್ನು ನಮೂನೆ ಸಿ-5ರಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್, ಎಡಿಸಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಚುನಾವಣಾ ಶಾಖೆಯ ನಾಗಭೂಷಣ್ ಸೇರಿದಂತೆ ಸಿಪಿಐ, ಸಿಪಿಎಂ, ಕಾಂಗ್ರೆಸ್, ಬಿಜೆಪಿ ಪಕ್ಷದ ಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಚಾರಕ್ಕೆ ಮಿತಿ :ಚುನವಣಾ ಪ್ರಚಾರ ಅವಧಿಯಲ್ಲಿ ಅಭ್ಯರ್ಥಿಗಳು ಕನಿಷ್ಠ 200 ಮಂದಿ ಮೀರದಂತೆ ಒಳಾಂಗಣ ಸಭೆ ಹಾಗೂ 1000 ಮಂದಿ ಮೀರದಂತೆ ತಾರಾ ಪ್ರಚಾರಕರ (ಸ್ಟಾರ್ ಕ್ಯಾಂಪೇನರ್) ಹಾಗೂ 500 ಮಂದಿ ಮೀರದಂತೆ ಇತರ ಹೊರಾಂಗಣ ಸಭೆಗಳನ್ನು ನಡೆಸಲು ಅವಕಾಶವಿದೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಮಾಡಿದ ವೆಚ್ಚದ ವಿವರವನ್ನು ಚುನಾವಣಾಧಿಕಾರಿಗಳಿಗೆ ಕಡ್ಡಾಯವಾಗಿ ಒದಗಿಸಬೇಕು.