

ಪುರುಷೋತ್ತಮ ಪೆರ್ಲ ಕಾಸರಗೋಡು
ಜಿಲ್ಲಾ ಪಂಚಾಯಿತಿ ಅಧೀನದಲ್ಲಿರುವ ಕಾಸರಗೋಡು ಕರಂದಕ್ಕಾಡಿನ ಬೀಜೋತ್ಪಾದನಾ ಕೇಂದ್ರದ ಭತ್ತದ ಗದ್ದೆಗೆ ಮಲಿನ ನೀರು ಹರಿದು ಬರುತ್ತಿರುವುದರಿಂದ ಸಮಸ್ಯೆ ಎದುರಾಗಿದೆ.
ಕಾಸರಗೋಡು ನಗರ ಪ್ರದೇಶದಿಂದ ಹರಿದು ಬರುವ ಮಲಿನ ನೀರು ಸಾಗುವ ಚರಂಡಿ ತಡೆಗೋಡೆ ಬಿರುಕುಬಿಟ್ಟ ಪರಿಣಾಮ ತ್ಯಾಜ್ಯ ಸೇರಿದಂತೆ ಮಲಿನ ನೀರು, ಬೀಜೋತ್ಪಾದನಾ ಕೇಂದ್ರದ ಭತ್ತದ ಗದ್ದೆ ಸೇರಿದಂತೆ ಕೃಷಿ ಪ್ರದೇಶಕ್ಕೆ ಬಂದು ಸೇರುತ್ತಿದೆ. ಇದರಿಂದ ಕೇಂದ್ರದ ಕೃಷಿ ಪ್ರದೇಶದಲ್ಲಿ ಇಲ್ಲಿನ ಕಾರ್ಮಿಕರಿಗೆ ಕೆಲಸ ನಿರ್ವಹಿಸಲಾಗದ ಸ್ಥಿತಿ ಎದುರಾಗಿದೆ.
ನಗರದ ಹೋಟೆಲ್, ವಸತಿ ಸಮುಚ್ಚಯ ಸೇರಿದಂತೆ ವಿವಿಧೆಡೆಯಿಂದ ಹರಿದು ಬರುವ ಕಲುಷಿತ ನೀರು ಭತ್ತದ ಗದ್ದೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಗದ್ದೆಯ ನೀರಿನ ಬಣ್ಣವೂ ಕಡುಕಪ್ಪಾಗಿದ್ದು, ಈ ನೀರು ಮುಟ್ಟಿದರೆ ಅತಿಯಾದ ತುರಿಕೆಯುಂಟಾಗುತ್ತಿರುವುದಾಗಿ ಕಾರ್ಮಿಕರು ತಿಳಿಸುತ್ತಾರೆ.
ಬೀಜೋತ್ಪಾದನಾ ಕೇಂದ್ರದಲ್ಲಿ ಗುಣಮಟ್ಟದ ಭತ್ತದ ಹಾಗೂ ತರಕಾರಿ ಬೀಜ ಬೆಳೆಸಲಾಗುತ್ತಿದ್ದು, ಇಲ್ಲಿಂದ ಜಿಲ್ಲೆಯ ವಿವಿಧ ಕೃಷಿಭವನಗಳಿಗೆ ಹಾಗೂ ಕೃಷಿ ವಿಜ್ಞಾನ ಕಾಲೇಜುಗಳಿಗೂ ಸರಬರಾಜು ಆಗುತ್ತಿದೆ. ಮಹಿಳೆಯರ ಸಹಿತ ಹಲವರು ಮಂದಿ ಕಾರ್ಮಿಕರು ಇಲ್ಲಿನ ಕೃಷಿ ಪ್ರದೇಶದಲ್ಲಿ ಕೆಲಸ ನಡೆಸುತ್ತಿದ್ದು, ಮಲಿನ ನೀರು ಗದ್ದೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ಕೃಷಿಕರಲ್ಲಿ ರೋಗಭೀತಿ ಉಂಟಾಗಿದೆ. ಶೌಚಗೃಹದ ಮಲಿನ ನೀರೂ ಬಂದು ಸೇರುತ್ತಿರುವುದರಿಂದ ಇಲ್ಲಿನ ಕಾರ್ಮಿಕರಿಗೆ ಕೆಲಸ ಮಾಡಲಾಗದ ಸ್ಥಿತಿ ಎದುರಾಗಿದೆ.
ನಗರಪ್ರದೇಶದ ಮಲಿನ ನೀರು ಹರಿಯಲು ಪ್ರತ್ಯೇಕ ಕಾಲುವೆ ನಿರ್ಮಿಸಿಕೊಡಬೇಕಾದ ಕಾಸರಗೋಡು ನಗರಸಭೆಯ ನಿರ್ಲಕ್ಷೃ ಧೋರಣೆಯಿಂದ ಭಾರಿ ನಷ್ಟ ಹಾಗೂ ರೋಗ ಭೀತಿಗೆ ಕಾರಣವಾಗುತ್ತಿದೆ. ಕಳೆದ ಏಳೆಂಟು ತಿಂಗಳಿಂದ ಇಲ್ಲಿ ಕೃಷಿ ನಡೆಸಲಾಗದಿರುವುದರಿಂದ ಉಂಟಾಗಿರುವ ನಷ್ಟವನ್ನು ಯಾರು ಭರಿಸಬೇಕೆಂಬ ಬಗ್ಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ.
ಕಾರ್ಮಿಕರಲ್ಲಿ ರೋಗ ಭೀತಿ
ಕಾಸರಗೋಡು ನಗರ ಪ್ರದೇಶದಿಂದ ಹರಿದು ಬರುವ ಮಲಿನ ನೀರು ಬಂದು ಸೇರುತ್ತಿರುವುದರಿಂದ ಕಳೆದ ಒಂದು ವರ್ಷದಿಂದ ಬೀಜೋತ್ಪಾದನಾ ಕೇಂದ್ರದಲ್ಲಿ ಸರಿಯಾಗಿ ಬೆಳೆ ಬೆಳೆಸಲಾಗುತ್ತಿಲ್ಲ. ಭತ್ತ, ತರಕಾರಿ ಬೀಜಗಳನ್ನು ಇಲ್ಲಿ ಬೆಳೆಸಿ ವಿವಿಧ ಕೃಷಿ ಭವನಗಳಿಗೆ ತಲುಪಿಸಲಾಗುತ್ತಿದ್ದು, ಮಲಿನ ನೀರು ಬಂದು ಸೇರುತ್ತಿರುವುದರಿಂದ ಕಳೆದ ಜೂನ್ ತಿಂಗಳಿಂದ ಇಲ್ಲಿ ಕೃಷಿ ನಡೆಸಲಾಗದ ಸ್ಥಿತಿ ಎದುರಾಗಿದೆ. ಮಾತ್ರವಲ್ಲ ಇಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಲ್ಲಿ ರೋಗ ಭೀತಿ ಆವರಿಸಿದೆ.
ಬೀಜೋತ್ಪಾದನಾ ಕೇಂದ್ರ ಹತ್ತು ಹೆಕ್ಟೇರ್‌ಗೂ ಹೆಚ್ಚು ಕೃಷಿಭೂಮಿ ಹೊಂದಿದ್ದು, ಮಲಿನ ನೀರು ಬಂದು ಸೇರುತ್ತಿರುವುದರಿಂದ ಸುಮಾರು ಐದು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗದ ಸ್ಥಿತಿ ಎದುರಾಗಿದೆ. ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಮನವರಿಕೆ ಮಾಡಲಾಗಿದ್ದು, ನಗರಸಭೆಗೂ ಪತ್ರ ಬರೆಯಲಾಗಿದೆ. ಅಲ್ಲದೆ ಮುಖ್ಯಮಂತ್ರಿ ಪರಿಹಾರ ಅದಾಲತ್‌ಗೂ ದೂರು ಸಲ್ಲಿಸಲಾಗಿದೆ. ನಿಶಾ ಜಿ, ಹಿರಿಯ ಕೃಷಿ ಅಧಿಕಾರಿ ಕರಂದಕ್ಕಾಡು ಸರ್ಕಾರಿ ಬೀಜೋತ್ಪಾದನಾ ಕೇಂದ್ರ ಮಲಿನ ನೀರು ಸರ್ಕಾರಿ ಬೀಜೋತ್ಪಾದನಾ ಕೇಂದ್ರದ ಕೃಷಿ ಪ್ರದೇಶಕ್ಕೆ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ನಗರಸಭೆಗೆ ಮಾಹಿತಿ ಲಭಿಸಿದೆ. ಇಲ್ಲಿ ಜಾಗ ಲಭ್ಯವಾದಲ್ಲಿ ಸೂಕ್ತ ಒಳಚರಂಡಿ ನಿರ್ಮಿಸಿ ಮಲಿನ ನೀರು ಹರಿಯುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಬ್ಬಾಸ್ ಬೀಗಂ, ನಗರಭಾ ಅಧ್ಯಕ್ಷ ಕಾಸರಗೋಡು ನಗರಸಭೆ https://www.vijayavani.net/mahila-dinacharane https://www.vijayavani.net/diganth-napatte