

ಮೂಡಿಗೆರೆ: ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಆಸ್ತಿ ಕಬಳಿಸಲು ಹೊರಟಿದೆ. ಇಂತಹ ಅವೈಜ್ಞಾನಿಕ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಬದ್ರಿಯಾ ಜುಮ್ಮಾ ಮಸೀದಿ ಯೂತ್ ಸಮಿತಿಯಿಂದ ಪಟ್ಟಣದ ಬದ್ರಿಯಾ ಮಸೀದಿ ಎದುರು ಪ್ರತಿಭಟನೆ ನಡೆಸಲಾಯಿತು.
ಯೂತ್ ಸಮಿತಿ ಸದಸ್ಯ ಕೆ.ಪಿ.ಖಾಲಿದ್ ಮಾತನಾಡಿ, ದೇಶಾದ್ಯಂತ ಇರುವ ವಕ್ಫ್ ಆಸ್ತಿ ಗಮನಿಸಿರುವ ಕೇಂದ್ರ ಸರ್ಕಾರ, ಅದನ್ನು ಕಬಳಿಸಿ ಶ್ರೀಮಂತ ಕಂಪನಿಗಳ ಮಾಲೀಕರಿಗೆ ಹಸ್ತಾಂತರಿಸಲು ಹುನ್ನಾರ ನಡೆಸಿದೆ. ವಕ್ಫ್ ಮಂಡಳಿಯ ರಾಜ್ಯ ಮತ್ತು ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಸಂಘ ಪರಿವಾರದವರನ್ನು ನೇಮಿಸಿಕೊಳ್ಳಲು ಸರ್ಕಾರ ಕಾಯ್ದೆಯನ್ನು ತಿರುಚಲು ಹೊರಟಿದೆ. ಇಂತಹ ಅವೈಜ್ಞಾನಿಕ ಕಾಯ್ದೆ ಒಪ್ಪಲು ಸಾಧ್ಯವಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಕಾಯ್ದೆ ಅಂಗೀಕಾರವಾಗದಂತೆ ವಿಪಕ್ಷಗಳು ಎಚ್ಚರಿಕೆ ವಹಿಸಬೇಕು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಕಾಯ್ದೆ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಅಯೂತ್ ಸಮಿತಿ ಅಧ್ಯಕ್ಷ ನಾಸೀರ್, ಬ್ಯಾರಿ ಒಕ್ಕೂಟದ ತಾಲೂಕು ಅಧ್ಯಕ್ಷ ಬಿ.ಎಚ್.ಮಹಮ್ಮದ್, ಮುಖಂಡರಾದ ಆಸಿಕ್, ಕಲಂದರ್, ಇಬ್ರಾಹಿಂ, ಸುನ್ನಿ ಇತರರಿದ್ದರು.