ರೈತರಿಗೆ ಧಕ್ಕೆಯಾಗುವ ಯೋಜನೆ ಕೈಬಿಡಲಿ

YLP MEETING
Published on

ಯಲ್ಲಾಪುರ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಸಭೆ ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕರ ಕನಕನಹಳ್ಳಿ ಅಧ್ಯಕ್ಷತೆಯಲ್ಲಿ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಗುರುವಾರ ನಡೆಯಿತು.

ಜಿಲ್ಲೆಯಲ್ಲಿ ಹರಿಯುವ ನದಿ, ಭೂಮಿ, ಪರಿಸರ ಮತ್ತು ರೈತರ ಹಕ್ಕಿಗೆ ಧಕ್ಕೆಯಾಗುವ ಯಾವುದೇ ಯೋಜನೆಯನ್ನು ಇನ್ನು ಮುಂದೆ ರೂಪಿಸದಂತೆ ನ್ಯಾಯಾಲಯವೇ ಶಾಶ್ವತ ತಡೆಯಾಜ್ಞೆ ನೀಡುವಂತೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕು. ಈಗಾಗಲೇ ಜಿಲ್ಲೆಯಲ್ಲಿ ಆದ ಯೋಜನೆಯ ಲಾಭ ಮತ್ತು ಹಾನಿಯನ್ನು ಜನತೆಯ ಮುಂದಿಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಬೇಡ್ತಿ ವರದಾ ನದಿ ಜೋಡಣೆ, ನದಿ ತಿರುವು ಯೋಜನೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್, ಕೇಣಿ ಬಂದರು ಯೋಜನೆಯನ್ನು ಕೂಡಲೇ ಕೈಬಿಟ್ಟಿದ್ದೇವೆ ಎಂದು ಘೊಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಳ್ಳಲಾಯಿತು.

ರೈತರಿಗಾಗುತ್ತಿರುವ ಕಾಡುಪ್ರಾಣಿ ಉಪಟಳ ತಡೆಯಬೇಕು. ಪಶ್ಚಿಮಘಟ್ಟ ಅಭಿವೃದ್ಧಿ, ವನೀಕರಣದ ಹೆಸರಿನಲ್ಲಿ ಹೊರದೇಶದಿಂದ ಹಣ ತಂದು ದುಂದು ವೆಚ್ಚ ಮಾಡುತ್ತಿರುವುದನ್ನು ತಡೆಯಬೇಕು. ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಸಂಚಾರಕ್ಕೆ ಯೋಗ್ಯವನ್ನಾಗಿಸುವತ್ತ ಸರ್ಕಾರ ಗಮನ ಹರಿಸಬೇಕು. ಕಸ್ತೂರಿ ರಂಗನ್ ವರದಿಯಂತೆ ಜಿಲ್ಲೆಯ ಕಾಡು, ಕೊಳ್ಳ ಸೇರಿದಂತೆ ವಿಶೇಷ ಸಂಗತಿಗಳನ್ನು ರಕ್ಷಿಸಲು ಸರ್ಕಾರ ಯೋಜನೆ ರೂಪಿಸುವುದಕ್ಕೆ ಸರ್ಕಾರ ಮುಂದಾಗುವಂತೆ ಮಾಡಬೇಕು ಎಂದು ನಿರ್ಣಯಿಸಲಾಯಿತು.

ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಪ್ರಮುಖರಾದ ಬಾ.ನಾ. ಮಾಧವ ಹೆಗಡೆ, ಗೋಪಾಲಕೃಷ್ಣ ಬಾಳೆಗದ್ದೆ, ಶ್ರೀಧರ ಭಾಗ್ವತ ಗುಂದ, ರಾಮಚಂದ್ರ ಕವಡಿಕೆರೆ, ಆರ್.ಟಿ. ಭಾಗ್ವತ ಭಟ್ಕಳ, ಎಂ.ಆರ್. ಹೆಗಡೆ ಹೊನ್ನಾವರ, ಗಣಪತಿ ಪಟಗಾರ ಕುಮಟಾ, ಮಹಾಬಲೇಶ್ವರ ಹೆಗಡೆ ಕೊಡ್ಲಗದ್ದೆ, ರಾಘವೇಂದ್ರ ಗಾಂವ್ಕಾರ, ವಿಘ್ನೕಶ್ವರ ಹೊಸ್ತೋಟ, ವಿನಾಯಕ ಹೆಗಡೆ ಮಲವಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net