

ಸಕಲೇಶಪುರ: ಕೂಲಿ ಕೆಲಸಕ್ಕೆ ಬಾಂಗ್ಲಾ ದೇಶದ ಕಾರ್ಮಿಕರ ಮೇಲಿನ ವ್ಯಾಮೋಹವನ್ನು ಕಾಫಿ ತೋಟದ ಮಾಲೀಕರು ಬಿಡಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಮಲೆನಾಡು ಭಾಗದ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ಬಾಂಗ್ಲಾ ದೇಶೀಯರು ನೆಲೆಸಿದ್ದಾರೆ. ಇವರನ್ನು ಹೊರ ಹಾಕುವ ಕೆಲಸ ಮಾಡದಿದ್ದಲ್ಲಿ ಸ್ಥಳೀಯವಾಗಿ ಅಶಾಂತಿ ಉಂಟಾಗುವುದರಲ್ಲಿ ಅನುಮಾನವಿಲ್ಲ. ಕಾಫಿ ಎಸ್ಟೇಟ್‌ಗಳ ಮಾಲೀಕರಿಗೆ ಕೈಮುಗಿದು ಮನವಿ ಮಾಡುತ್ತೇನೆ, ದೇಶ ಉಳಿಸುವ ಕೆಲಸ ಮಾಡಿ ಕೆಲಸಕ್ಕೆ ಬಾಂಗ್ಲಾ ದೇಶಿಯರನ್ನು ತೆಗೆದುಕೊಳ್ಳಬೇಡಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಈಗಾಗಲೇ ಕೊಡಗು, ಚಿಕ್ಕಮಗಳೂರಿನಲ್ಲಿ ಕಾಫಿ ತೋಟದ ಮಾಲೀಕರ ವಿರುದ್ಧವೇ ಬಾಂಗ್ಲಾ ದೇಶೀಯರು ತಿರುಗಿಬಿದ್ದಿರುವ ಉದಾಹರಣೆ ಇದೆ. ಉತ್ತರ ಕರ್ನಾಟಕ ಭಾಗದಿಂದ ಕಾರ್ಮಿಕರ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಕೇಂದ್ರ ಸರ್ಕಾರ ಬಾಂಗ್ಲಾದವರನ್ನು ಹೊರ ಹಾಕಲು ನಿರ್ಲಕ್ಷ್ಯ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯಿಂದ ಬಾಂಗ್ಲಾದವರ ಸರ್ವೆ ಮಾಡಿ ನಾವೇ ಓಡಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಮಾಜಕ್ಕೆ ಅವಶ್ಯಕತೆ ಇರುವುದರಿಂದ ಹಿಂದು ಮುಖಂಡರು ನಿಷ್ಕ್ರಿಯರಾಗಿ ಮನೆಯಲ್ಲಿ ಕೂರಬಾರದು. ಹಿಂದು ಸಂಘಟನೆ ಪ್ರಮುಖರೊಡನೆ ಚರ್ಚೆ ಮಾಡಿ ಸೂಕ್ತ ಜವಾಬ್ದಾರಿ ಕೊಡುತ್ತೇವೆ. ಹಿಂದುಗಳು ಸಮಾಜದಲ್ಲಿ ಭಯದಿಂದಲೇ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹಿನ್ನೆಲೆಯಲ್ಲಿ ಹಿಂದು ಸಮಾಜವನ್ನು ಕಟ್ಟುವ ಕೆಲಸವನ್ನು ಶ್ರೀರಾಮಸೇನೆ ಸದಾ ಮಾಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಗೊಂದಲ ಸೃಷ್ಟಿ: ಕಳೆದ 25 ವರ್ಷಗಳಿಂದ ದತ್ತಪೀಠ ಪರ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಸುಪ್ರೀಂಕೋರ್ಟ್ ಸಮಸ್ಯೆಯನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಳ್ಳಿ ಅಂಥ ಮುಖ್ಯಮಂತ್ರಿಗೆ ಹೇಳಿದ್ದರೂ ಕಾಂಗ್ರೆಸ್ ಸರ್ಕಾರ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಹೀಗಾಗಿ ರಾಜ್ಯ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣ ಬಿಟ್ಟು ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು. ಸಾವಿರಾರು ವರ್ಷಗಳಿಂದ ಗೋವನ್ನು ಪೂಜಿಸುತ್ತ ಬಂದಿದ್ದೇವೆ. ಆದರೆ ಹಿಂದುಗಳ ಭಾವನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಗೋ ಹತ್ಯೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋವನ್ನು ಕಡಿಯುವರು ಇದೇ ರೀತಿ ಮುಂದುವರಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಿರುಪತಿ ದುರಂತಕ್ಕೆ ಬೇಸರ: ತಿರುಪತಿಯಲ್ಲಿ ಏಕಾದಶಿ ದಿನ ನಡೆದ ದುರಂತ ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
6 ಭಕ್ತರು ಸಾವಿಗೀಡಾಗಿ, 50 ಜನರು ಆಸ್ಪತ್ರೆಯಲ್ಲಿ ಇದ್ದಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಬರುತ್ತಾರೆ. ಗದ್ದಲ, ಗೊಂದಲ ಆಗದೆ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ಆಡಳಿತ ಮಂಡಳಿಯದ್ದಾಗಿದೆ. ಆ ಸಾವುಗಳಿಗೆ ಆಡಳಿತ ಮಂಡಳಿ ಕಾರಣ. ಮೃತಪಟ್ಟವರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ಕೊಡಬೇಕು, ಈ ರೀತಿಯ ಘಟನೆ ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಹಿಂದು ಮುಖಂಡರಾದ ರಘು ಸಕಲೇಶಪುರ, ಹೆತ್ತೂರು ವಿಜಯ್ ಕುಮಾರ್, ಧರ್ಮೇಶ್, ಕೌಶಿಕ್, ಬೆಂಗಳೂರಿನ ಹಿಂದು ಮುಖಂಡ ತೇಜಸ್ ಗೌಡ ಇದ್ದರು.