

ಭದ್ರಾವತಿ: ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ದುಡಿಯುವ ಜನರಿಗೆ ಉದ್ಯೋಗ ನೀಡಬೇಕು. ರೈಲ್ವೆ, ವಿದ್ಯುತ್ ಒಳಗೊಂಡಂತೆ ಎಲ್ಲ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣವನ್ನು ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಮತ್ತು ಸೇವೆಗಳನ್ನು ಬಲಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿ ತಾಲೂಕು ದಂಡಾಧಿಕಾರಿಗಳ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳು ಕಳೆದಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ, ಡಾ. ಸ್ವಾಮಿನಾಥನ್ ವರದಿ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ತಿಳಿಸಲಾಗಿತ್ತು. ಇದುವರೆಗೂ ಯಾವುದೇ ಭರವಸೆಗಳು ಈಡೇರಿಲ್ಲ ಎಂದು ದೂರಿದರು.
ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆ ರೂಪಿಸಬೇಕು. ಎನ್‌ಇಪಿ ನಿಲ್ಲಿಸಬೇಕು. 20 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರಿಗೆ 31 ಸಾವಿರ ರೂ. ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಹಾಗೂ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ತಾಲೂಕು ಸಂಚಾಲಕ ಎಂ.ನಾರಾಯಣ್, ಪ್ರಮುಖರಾದ ಹನುಮಮ್ಮ, ಎಂ.ಅನಂತರಾಮು, ರೂಪಾ, ಸರಸ್ವತಿ, ಸುಧಾ ಇತರರಿದ್ದರು.