

ಧಾರವಾಡ: ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಷೇಧಿಸಿದೆ. ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಗ್ರಹ ತಯಾರಕರು, ಮಾರಾಟಗಾರರು, ಪರಿಸರವಾದಿಗಳ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಸ್ಥಾಪನೆಗೆ ಸರ್ಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಗಳನ್ನು ನೀಡಿದೆ. ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಸರ್ಕಾರ 2016ರಲ್ಲಿ ನಿಷೇಧಿಸಿದೆ. ಆದೇಶ ಉಲ್ಲಂಸಿದರೆ ಮತ್ತು ಜಲಮೂಲಗಳಲ್ಲಿ ವಿಸರ್ಜಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ, 10 ಸಾವಿರ ರೂ. ದಂಡ ಮತ್ತು ಜೈಲುವಾಸ ವಿಧಿಸಬಹುದು ಎಂದು ಎಚ್ಚರಿಕೆ ನೀಡಿದರು.
ಅವಳಿನಗರ ಹಾಗೂ ಜಿಲ್ಲೆಯ ಯಾವುದೇ ಸ್ಥಳದಲ್ಲಿ ಪಿಒಪಿ ವಿಗ್ರಹಗಳ ದಾಸ್ತಾನು, ಮಾರಾಟ ಕಂಡುಬಂದರೆ ಸಾರ್ವಜನಿಕರು ತಮ್ಮ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಪಿಒಪಿ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ನಿರಂತರ ನಿಗಾ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸಮಿತಿಯವರು ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅದಕ್ಕಾಗಿ ಏಕಗವಾಕ್ಷಿ (ಸಿಂಗಲ್ ವಿಂಡೋ) ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಮಾತನಾಡಿ, ಗಣೇಶ ಸ್ಥಾಪನೆ ಹಾಗೂ ವಿಸರ್ಜನೆಯ ದಿನಗಳಂದು ಮಾಡುವ ಮೆರವಣಿಗೆಯು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಮಾರ್ಗದಲ್ಲಿ ಸಂಚರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ನಿಗದಿಪಡಿಸಿದ ಡಿಸೆಬಲ್ ಹೊಂದಿರುವ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿದೆ. ಡಿಜೆ ಬಳಕೆಗೆ ಅವಕಾಶವಿಲ್ಲ. ಗಣೇಶೋತ್ಸವದಲ್ಲಿ ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅವಕಾಶವಿದೆ ಎಂದರು.
ಉಪ ಪೊಲೀಸ್ ಆಯುಕ್ತ ರಾಜೀವ ಎಂ., ಉಪ ವಿಭಾಗಾಧಿಕಾರಿ ಅಶೋಕ ತೇಲಿ, ವಿಗ್ರಹ ತಯಾರಕರು, ಮಾರಾಟಗಾರರು, ಪರಿಸರವಾದಿಗಳಿದ್ದರು.