

ಚಳ್ಳಕೆರೆ: ಮಾದಿಗರು ಸೇರಿ ದಲಿತ, ಹಿಂದುಳಿದ ಸಮುದಾಯದಲ್ಲಿ ಹಬ್ಬ, ಜಾತ್ರೆಗಳಿಂದ ದೂರ ಇರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಆಚರಣೆಗೆ ಸೀಮಿತಗೊಳ್ಳಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದರು.
ಚಳ್ಳಕೆರೆ ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನಗರದ ಅನಂತನಾಥ ಜೈನಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಆದರೆ, ಮಾದಿಗ ಸೇರಿ ಅತ್ಯಂತ ಸಂಕಷ್ಟದಲ್ಲಿರುವ ಜಾತಿ ಜನರು ಜಾತ್ರೆ, ಹಬ್ಬದ ಹೆಸರಲ್ಲಿ ಸಾಲ ಮಾಡಿ ಆಚರಿಸುತ್ತಿರುವುದು ಸಮುದಾಯ ಹಿಂದುಳಿಯಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ಹಬ್ಬಳ ಹೆಸರಲ್ಲಿ ಹಣ ವೆಚ್ಚ ಮಾಡುವುದು ಹಾಗೂ ಮೌಢ್ಯಾಚರಣೆಗಳಿಗೆ ಕಡಿವಾಣ ಹಾಕಿ, ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿದರೆ ಸಮುದಾಯ ಶೀಘ್ರದಲ್ಲಿಯೇ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದರು.