ಉನ್ನತ ಸಾಧನೆಯ ಹಾದಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ

mng-8apri-ATHMASHAKTHI
Published on



ಮಂಗಳೂರು : ಸಹಕಾರ ತತ್ವದ ಮೂಲಕ ಸಾರ್ವಜನಿಕ ಸೇವೆಯ ಸದುದ್ದೇಶದ ಧ್ಯೇಯದೊಂದಿಗೆ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ 2012ರ ಜ.30ರಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರಿಂದ ಉದ್ಘಾಟನೆಗೊಂಡು ಕಾರ್ಯನಿರ್ವಹಿಸುತ್ತಿರುವ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉನ್ನತ ಸಾಧನೆಯ ಹಾದಿಯಲ್ಲಿದೆ.
ಸಂಘವು 2023-24ನೇ ಸಾಲಿನಲ್ಲಿ 2000 ಕೋಟಿ ರೂ. ಮೀರಿ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ 225 ಕೋಟಿ ರೂ. ಅಧಿಕ ಠೇವಣಿ, 178 ಕೋಟಿ ರೂ. ಮಿಕ್ಕಿ ಸಾಲ, 1.48 ಕೋಟಿ ರೂ. ಪಾಲು ಬಂಡವಾಳದೊಂದಿಗೆ ಸಂಘವು 3.3 ಕೋಟಿ ರೂ.ಮಿಕ್ಕಿ ಲಾಭಗಳಿಸಿರುವುದು ಸಂಘದ ಹೆಗ್ಗಳಿಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ತಿಳಿಸಿದ್ದಾರೆ.
ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಸುಮಾರು 14,000 ಚದರಡಿಯ ಸ್ವಂತ ಕಟ್ಟಡವನ್ನು ಹೊಂದಿದ ದ.ಕ. ಜಿಲ್ಲೆಯ ಏಕಮಾತ್ರ ವಿವಿಧೋದ್ದೇಶ ಸಹಕಾರಿ ಸಂಘವಾಗಿದೆ. ಅಲ್ಪಾವಧಿಯಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ 30 ಶಾಖೆಗಳು ಆರಂಭವಾಗಿ ನುರಿತ ಸಿಬ್ಬಂದಿ ವರ್ಗದ ಅತ್ಯುತ್ತಮ ಗುಣಮಟ್ಟದ ಸೇವೆಗಾಗಿ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳ ಗರಿಗಳನ್ನು ಮುಡಿಗೇರಿಸಿಕೊಂಡಿದೆ.
ಆತ್ಮಶಕ್ತಿ ಸಹಕಾರಿ ಸಂಘವು ಮಹಿಳಾ ಸಬಲೀಕರಣದೊಂದಿಗೆ ಶೇ. 95 ಮಹಿಳಾ ಸಿಬ್ಬಂದಿಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆಯೊಂದಿಗೆ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ. ಸಂಘವು ಮುಂದಿನ ದಿನಗಳಲ್ಲಿ ಕೊಡಗು, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳ ವ್ಯಾಪ್ತಿಗಳಿಗೆ ತನ್ನ ಶಾಖೆಗಳನ್ನು ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದೆ.
ಸಂಘದ ಸದಸ್ಯರಿಗೆ ನಿರಂತರ ಡಿವಿಡೆಂಡ್ ನೀಡಿದ ಕೀರ್ತಿಯನ್ನು ಹೊಂದಿದೆ. ಪ್ರಾರಂಭದಿಂದಲೂ ಆಡಿಟ್ ವರ್ಗೀಕರಣದಲ್ಲಿ ಎ ತರಗತಿಯನ್ನು ಗಳಿಸಿದೆ. ಲಾಭಾಂಶದಲ್ಲಿ ಈಗಾಗಲೇ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತೀ ಅವಶ್ಯಕತೆ ಇರುವವರಿಗೆ ಸಹಾಯಧನ ೀಡುತ್ತಾ ಬಂದಿದೆ. ಮಹಿಳೆಯರ ಸಬಲೀಕರಣಕ್ಕೆ ಪ್ರಾಶಸ್ತ್ಯ ನೀಡಿದೆ. ಪ್ರತೀ ಶಾಖೆಗಳ ವಾರ್ಷಿಕೋತ್ಸವ ಸಮಾರಂಭದಂದು ಮಂಗಳೂರಿನ ಪ್ರಮುಖ ಆಸ್ಪತ್ರೆಗಳ ಸಹಯೋಗದೊಂದಿಗೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಉಚಿತ ದಂತ ತಪಾಸಣಾ ಶಿಬಿರ, ಉಚಿತ ಆರೋಗ್ಯ ಕಾರ್ಡ್ ವಿತರಣೆ ಮುಂತಾದ ಶಿಬಿರಗಳನ್ನು ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net