26 ರಂದು ಕೃಷ್ಣಾ ನದಿಗೆ ಆರತಿ ಪೂಜೆ

Aarti Puja to Krishna river on 26th
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಎಂಆರ್‌ಎನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿದರು. ಹಿಪ್ಪರಗಿಯ ಸಂಗಮೇಶ್ವರ ಪ್ರಭುಜೀ ಬೆನ್ನಾಳ ಮಹಾರಾಜರು, ಜಿಪಂ ಮಾಜಿ ಸದಸ್ಯ ಪಿ.ಆರ್. ಪಾಲಬಾಂವಿ, ಸೋಮನಾಥ ಪಾಟೀಲ ಇತರರಿದ್ದರು.
Published on

ಜಮಖಂಡಿ: ಶ್ರೀಕೃಷ್ಣ ಜನ್ಮಾಷ್ಠಮಿ ದಿನ ಆ.26 ರಂದು ಗಂಗಾರತಿ ಮಾದರಿಯಲ್ಲಿ ಕೃಷ್ಣಾ ನದಿಗೆ ಆರತಿ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಎಂಆರ್‌ಎನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣದಲ್ಲಿ ಶುಕ್ರವಾರ ನಡೆದ ಕೃಷ್ಣಾ ನದಿಯ ಎಡ ಮತ್ತು ಬಲ ಭಾಗದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೃಷ್ಣಾ ನದಿಯಿಂದ ಜೀವನ ಕಟ್ಟಿಕೊಂಡಿರುವ ರೈತರಿಂದ ಕೃಷ್ಣಾ ತಾಯಿಗೆ ಗೌರವ ನೀಡುವ ನಿಟ್ಟಿನಲ್ಲಿ ಕೃಷ್ಣಾರತಿ ಕಾರ್ಯಕ್ರಮದಲ್ಲಿ ನಾಲ್ಕಾರು ಸಾವಿರಕ್ಕೂ ಅಧಿಕ ಜನರು ಭಾಗವಹಿಸುವರು ಎಂದರು.

ಹಿಪ್ಪರಗಿ ಸಂಗಮೇಶ್ವರ ದೇವಸ್ಥಾನದ ಹತ್ತಿರ ಉತ್ತರಾಭಿಮುಖವಾಗಿ ಹರಿದಿರುವ ನದಿಗೆ ಪೂಜೆ ಸಲ್ಲಿಸಿ, ಕೃಷ್ಣಾ ಆರತಿ ಮಾಡಲಾಗುವುದು. ಬರುವ ದಿನಗಳಲ್ಲಿ ಆರತಿ ಪೂಜೆ ಸರ್ಕಾರಿ ಕಾರ್ಯಕ್ರಮವಾಗಬೇಕು. ಆ ನಿಟ್ಟಿನಲ್ಲಿ ರೈತರು ಒಗ್ಗಟ್ಟಾಗಿ ಸಹಸ್ರಾರು ಸಂಖ್ಯೆಯಲ್ಲಿ ರೈತರೆಲ್ಲರೂ ಸೇರಬೇಕು ಎಂದರು.

ಕೃಷ್ಣಾ ಆರತಿಗೆ ಉತ್ತರ ಪ್ರದೇಶ ಮತ್ತು ಮೈಸೂರಿನಿಂದ ನದಿಗೆ ಆರತಿ ಮತ್ತು ಪೂಜೆ ಮಾಡುವ ಪಂಡಿತರು ಆಗಮಿಸುವರು. ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸುವರು.

ಬೆಳಗ್ಗೆ 10 ರಿಂದ ಅಂದಾಜು ಕೃಷ್ಣಾ ನದಿಗೆ ಬಾಗಿನ ಅರ್ಪಣೆ, ಪೈಪ್‌ಲೈನ್ ಪೂಜೆ ನಡೆಯಲಿದೆ. ಸಂಜೆ ನಾಡಿನ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ, ಸಾಹಿತ್ಯಿಕ, ಧಾರ್ಮಿಕವಾಗಿ ಕೃಷ್ಣಾ ನದಿ ಬಗ್ಗೆ ವಿಚಾರ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 7 ರಿಂದ ಕೃಷ್ಣಾ ನದಿಗೆ ಪೂಜೆ ನಂತರ ಕೃಷ್ಣಾ ನದಿಗೆ ಆರತಿ, ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾತ್ರಿ 12 ಗಂಟೆಗೆ ಶ್ರೀಕೃಷ್ಣನ ನಾಮಕರಣ ನಡೆಯಲಿದೆ. ಹಿಪ್ಪರಗಿ ಬ್ಯಾರೇಜ್ ಹಾಗೂ ನದಿ ಪಕ್ಕದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು, ನದಿಯಲ್ಲಿ ಪೂಜೆ ಹಾಗೂ ಆರತಿ ಮಾಡುವುದಕ್ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಬೋಟ್‌ಗಳನ್ನು ತರಿಸಲಾಗುವುದು ಎಂದು ತಿಳಿಸಿದರು.

ಹಿಪ್ಪರಗಿಯ ಸಂಗಮೇಶ್ವರ ಪ್ರಭುಜೀ ಬೆನ್ನಾಳ ಮಹಾರಾಜರು, ಜಿಪಂ ಮಾಜಿ ಸದಸ್ಯ ಪಿ.ಆರ್. ಪಾಲಬಾಂವಿ, ಸೋಮನಾಥ ಪಾಟೀಲ, ಉಮೇಶ ಪಾಟೀಲ, ಈಶ್ವರ ಕರಬಸಪ್ಪನವರ, ಭೀಮಸಿ ಮಗದುಮ, ಶಂಕರ ಕಿತ್ತೂರ, ಸಂಗಪ್ಪ ಪಾಯಗೊಂಡ, ಸಿದ್ದನಗೌಡ ಖಾನಗೌಡ, ಪಾರಿಸ್ ಬಳಗಾರ, ಪರಪ್ಪ ಮೂಕನವರ, ಶಿವನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net