

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಹದಿನೈದನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಅ.12ರ ರಾತ್ರಿ ಪಟ್ಟಣದ ಭದ್ರಾ ನದಿ ದಡದಲ್ಲಿ ವಿಶೇಷ ಭದ್ರಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದರು.
ಮಲೆನಾಡು ಹಾಗೂ ಬಯಲು ಸೀಮೆಯ ರೈತರು, ಜನರ ಜೀವನಾಡಿಯಾದ ಭದ್ರಾ ನದಿಗೆ ಪಂಚ ಪುರೋಹಿತರಿಂದ ವಿಶೇಷ ಭದ್ರಾ ಆರತಿ ನಡೆಸಲಾಗುವುದು ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ದೇಶದ ಸಂಸ್ಕೃತಿಯಲ್ಲಿ ಭೂಮಿ, ಗಂಗೆಯನ್ನು ದೇವರಿಗೆ ಹೋಲಿಸಿ ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಶಿ-ವಾರಾಣಸಿಯಲ್ಲಿ ಗಂಗಾನದಿಗೆ ನಡೆಯುವ ಗಂಗಾರತಿಯಂತೆ ಈ ಭಾಗದಲ್ಲಿ ಜನರ ಜೀವನಕ್ಕೆ ಪೂರಕವಾಗಿರುವ ಭದ್ರಾ ನದಿಗೆ ಪ್ರಥಮ ಬಾರಿಗೆ ಆರತಿ ನಡೆಸಲಾಗುತ್ತದೆ. ಭದ್ರಾ ಆರತಿಯ ಧಾರ್ಮಿಕ ಪೂಜಾ ಕಾರ್ಯದಿಂದ ಪವಿತ್ರ ಗಂಗಾ ಮಾತೆಯು ಪ್ರಸನ್ನಳಾಗಿ ಭದ್ರಾ ನದಿಯ ತಟದ ಕೃಷಿ ಭೂಮಿಗೆ, ಬಯಲುಸೀಮೆ ನಾಡಿನ ರೈತರಿಗೆ ಸದಾ ನೀರನ್ನು ಪೂರೈಕೆ ಮಾಡುತ್ತಿರಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಭದ್ರಾ ಆರತಿ ಸಂದರ್ಭದಲ್ಲಿ ವಿಶೇಷವಾಗಿ ಮಾತೆಯರು ಮನೆಗಳಿಂದ ವಿವಿಧ ಪುಷ್ಪಗಳನ್ನು ತಂದು ಪೂಜಾ ವಿಧಾನದ ಮೂಲಕ ಸಮರ್ಪಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಭದ್ರಾ ಆರತಿಯೊಂದಿಗೆ ದುರ್ಗಾದೇವಿಯ ಜಲಸ್ತಂಭನಾ ಶೋಭಾಯಾತ್ರೆ ಅ.12ರಂದು ವಿಶೇಷವಾಗಿ ನಡೆಯಲಿದೆ. ಸ್ತಬ್ಧಚಿತ್ರಗಳು, ಹುಲಿವೇಷ, ಮರಗೋಲು, ನವಿಲು ಕುಣಿತ, ಮೀನು ನರ್ತನ, ಥೈಯ್ಯಂ ನೃತ್ಯ, ವಿವಿಧ ಪಕ್ಷಿಗಳ ನರ್ತನ ಸೇರಿದಂತೆ 20ಕ್ಕೂ ಅಧಿಕ ಕಲಾತಂಡಗಳು ಮೆರವಣಿಗೆಗೆ ಕಳೆಗಟ್ಟಲಿವೆ ಎಂದರು.
ವಿಜಯದಶಮಿಯಂದು 15 ಸಾವಿರ ಭಕ್ತರಿಗೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಿಕೊಂಡಿದ್ದು, ಶೋಭಾಯಾತ್ರೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ಸಿಗೆ ಭಕ್ತರ ಪಾಲ್ಗೊಳ್ಳುವಿಕೆ ಪ್ರಮುಖವಾಗಿದೆ ಎಂದು ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಉಪಾಧ್ಯಕ್ಷ ಶಿವರಾಮ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಪ್ರಭಾಕರ್, ನಟರಾಜ್ ಶೆಟ್ಟಿ, ಎಚ್.ಡಿ.ಸತೀಶ್, ನಾಗರಾಜ್ ಬರಗಲ್, ಡಿ.ಎನ್.ಸುಧಾಕರ್ ಇತರರಿದ್ದರು.