

ಗದಗ: ದಸರಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಮಹತ್ವವನ್ನು ಪಡೆದಿರುವ ಕುಮಾರಿಯರನ್ನು ದೇವತೆಯ ಸ್ವರೂಪದಿಂದ ಆರಾಧಿಸುವ ಕಾರ್ಯಕ್ರಮ ಗದುಗಿನ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಮಂದಿರದಲ್ಲಿ sಸೋಮವಾರ ಶೃದ್ಧಾಭಕ್ತಿಯೊಂದಿಗೆ ಜರುಗಿತು.
ಪಾಲಕರು ತಮ್ಮ ಮಕ್ಕಳಿಗೆ ಅಭ್ಯಂಗ ಸ್ನಾನ ಮಾಡಿಸಿ ಪರಿಶುದ್ದತೆಯೊಂದಿಗೆ ಸೂರ್ಯಾಸ್ತದ ಸಮಯಕ್ಕೆ ಶ್ರೀಮಠಕ್ಕೆ ಕರೆದುಕೊಂಡು ಬಂದಿದ್ದರು. ಮಠದ ದ್ವಾರಬಾಗಿಲ ಬಳಿ ಈ ಕುಮಾರಿಯರ ಪಾದಪೂಜೆ ನೆರವೇರಿಸಿ ವೇದಘೋಷಗಳೊಂದಿಗೆ ಶ್ರೀ ಅನ್ನಪೂರ್ಣೆಶ್ವರಿಯ ಸನ್ನಿದಾನಕ್ಕೆ ಬರಮಾಡಿಕೊಳ್ಳಲಾಯಿತು.
ಜಾತ್ರಾ ಮಹೋತ್ಸವದ ಮಹಿಳಾ ಸಮಿತಿಯ ಪದಾಧಿಕಾರಿಗಳು ಎಲ್ಲ ಕುಮಾರಿಯರಿಗೆ ಹೂವಿನ ದಂಡಿ, ಕೈಗೆ ಹಸಿರು ಬಳೆ ಮುಡಿಸಿ ಸಿಂಧೂರ ತಿಲಕವನ್ನಿತ್ತು, ಫಲಪುಷ್ಪ, ಕಾಣಿಕೆ ಉಡಿ ತುಂಬಿ ಆರತಿಯೊಂದಿಗೆ ದೇವಿಯನ್ನು ಸ್ತುತಿಸಿದರು.
ನಂತರ ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ವೇ.ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಸಮಿತಿಯ ಅಧ್ಯಕ್ಷ ಪ್ರಕಾಶ ಬಂಡಿ, ಮಹಿಳಾ ಸಮಿತಿಯ ಅಧ್ಯಕ್ಷೆ ಪ್ರಮೀಳಾದೇವಿ ಬಳಿಗಾರ, ನಿವೃತ್ತ ತಹಶೀಲ್ದಾರ ಎಲ್.ಎಸ್.ನೀಲಗುಂದ ಸೇರಿದಂತೆ ಪದಾಧಿಕಾರಿಗಳು ದೇವಿಯ ಸ್ವರೂಪರಾದ ಕುಮಾರಿಯರಿಗೆ ಮಹಾಪ್ರಸಾದ ಮಾಡಿಸಿ ಭಕ್ತಿಯಿಂದ ನಮಿಸಿದರು.