ಎಎಪಿಯಿಂದ ‘ನಮಗೇಕಿಲ್ಲ ಕ್ಯಾಂಪಸ್ ಇಂಟರ್ವ್ಯೆ? ಅಭಿಯಾನ

Job
Published on

ಮೈಸೂರು: ಪ್ರತಿಷ್ಠಿತ ಕಂಪನಿಗಳು ಕ್ಯಾಂಪಸ್ ಸಂದರ್ಶನಕ್ಕಾಗಿ ಖಾಸಗಿ ಕಾಲೇಜುಗಳಿಗಷ್ಟೇ ಹೋಗುತ್ತಿವೆ. ಸರ್ಕಾರಿ ಕಾಲೇಜುಗಳನ್ನು ನಿರ್ಲಕ್ಷಿಸುತ್ತಿದ್ದು, ಇಲ್ಲಿಯೂ ಕ್ಯಾಂಪಸ್ ಸಂದರ್ಶನ ಕಡ್ಡಾಯ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದಿಂದ ‘ನಮಗೇಕಿಲ್ಲ ಕ್ಯಾಂಪಸ್ ಇಂಟರ್ವ್ಯೆ?’ ಎಂಬ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಜಿ.ಹುನುಮಾಪುರ ತಿಳಿಸಿದರು.

ರಾಜ್ಯಾದ್ಯಂತ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಅದರಂತೆ ನಗರದ ಮಹಾರಾಜ, ಮಹಾರಾಣಿ ಹಾಗೂ ಯುವರಾಜ ಕಾಲೇಜುಗಳ ಬಳಿಗೆ ಹೋಗಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕರಪತ್ರ ವಿತರಿಸಲಾಗುವುದು. ಅದರಲ್ಲಿನ ಮೊ. ಸಂ.7669 100 500ಗೆ ಅವರು ಮಿಸ್ಡ್ ಕಾಲ್ ಮಾಡಿದಲ್ಲಿ, ಅವರ ಅಭಿಪ್ರಾಯ ದಾಖಲಿಸಲಾಗುವುದು. ಜತೆಗೆ ಸಹಿ ಸಂಗ್ರಹವೂ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಯದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಇಲ್ಲಿಯೂ ಕ್ಯಾಂಪಸ್ ಸಂದರ್ಶನ ಕಡ್ಡಾಯಗೊಳಿಸುವಂತೆ ಆದೇಶ ತರಲು ಸಾಧ್ಯವೇ ಎಂದು ಪರಿಶೀಲಿಸಲಾಗುವುದು. ಈಗಾಗಲೇ ಪಕ್ಷ ಅಧಿಕಾರದಲ್ಲಿರುವ ದೆಹಲಿ ಮೊದಲಾದ ಕಡೆಗಳಲ್ಲಿ ಈ ವ್ಯವಸ್ಥೆಯಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಿರಣ್, ಧರ್ಮಶ್ರೀ, ಹರೀಶ್, ಜನಾರ್ದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net