

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಬಡಾವಣೆಯಲ್ಲಿ ತಲೆದೋರಿರುವ ಮೂಲ ಸೌಲಭ್ಯ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಶನಿವಾರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಿಜಯಪುರ ನಗರವು ನಗರಸಭೆಯಿಂದ ಬಡ್ತಿ ಹೊಂದಿ ಮಹಾನಗರ ಪಾಲಿಕೆಯಾಗಿದ್ದರೂ ಇನ್ನೂ ಹಲವಾರು ಬಡಾವಣೆಗಳಲ್ಲಿ ಮೂಲ ಸೌಕರ್ಯ ಇಲ್ಲದೆ ಸಮಸ್ಯೆಗಳ ಆಗರವಾಗಿದೆ. ಮಹಾನಗರ ಪಾಲಿಕೆಯಾದ ನಂತರ ಸರ್ಕಾರವು ಪ್ರತಿ ವರ್ಷಕ್ಕೆ ೧೦೦ ಕೋಟಿ ರೂ. ಹಣ ಬಿಡುಗಡೆ ಮಾಡುತ್ತಿದ್ದು,ಆ ಹಣವನ್ನು ಮಹಾನಗರ ಪಾಲಿಕೆಯು ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ವಾರ್ಡಗಳಲ್ಲಿ ಪಾಲಿಕೆ ಸದಸ್ಯರು ಇಲ್ಲದೆ ಇರುವುದರಿಂದ ಬಡಾವಣೆಗಳ ಜನರ ಸಮಸ್ಯೆಗಳು ಹಾಗೇಯೇ ಉಳಿದಿವೆ. ನಗರದಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟುದ್ದುಮ ಅವುಗಳ ದುರಸ್ತಿಗೊಳಿಸಬೇಕು. ಬಹುತೇಕ ಕಡೆ ಬೀದಿ ದೀಪಗಳ ಸಮಸ್ಯೆಯಾಗುತ್ತಿದ್ದು ಇನ್ನೂವರೆಗೆ ಸರಿಪಡಿಸಿಲ್ಲ. ಕೇಂದ್ರ ಸಾರಿಗೆ ನಿಲ್ದಾಣದಿಂದ ಜಮಖಂಡಿಗೆ ಹೋಗುವ ಮಾರ್ಗ, ಮಹಾನಗರ ಪಾಲಿಕೆಯಿಂದ ಆರ್‌ಟಿಒ ಕಚೇರಿವರೆಗೆ ಹಾಗೂ ವಿಜಯಪುರ ನಗರದಲ್ಲಿ ಬಹುತೇಕ ಕಡೆ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲ. ಇನ್ನೂ ಜಲನಗರ ಕ್ರಾಸ್‌ದಿಂದ ಬಿಡಿಎ ವರೆಗೆ ಮತ್ತು ಬಡಾವಣೆಯ ಒಳ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ನಗರದಲ್ಲಿರುವ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ನಗರದ ಹಲವಾರು ಬಡಾವಣೆಗಳಲ್ಲಿ ರಸ್ತೆ, ನೀರು, ವಿದ್ಯುತ್ ಕೇಬಲ್ ಅಳವಡಿಕೆ, ಗ್ಯಾಸ್ ಪೈಪ್ ಅಳವಡಿಕೆ ಕಾಮಗಾರಿಗಳಿಗೆ ಅನುಕೂಲವಾಗುವ ಹಾಗೇ ಮುಂಚೆಯೇ ಕಾಮಗಾರಿಗಳನ್ನು ಮಾಡಬೇಕು. ಸಮಸ್ಯೆಗಳನ್ನು ಬಗೆಹರಿಸದೆ ಹೋದಲ್ಲಿ ಆಮ್ ಆದ್ಮಿ ಪಕ್ಷವು ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಎಪಿ ಜಿಲ್ಲಾಧ್ಯಕ್ಷ ಬೋಗೇಶ ಸೋಲಾಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನರಾಜ ಬಸವಂತಿ, ನಾರಾಯಣ ಆರ್.ಸಂಸ್ಥಾನಿಕ, ನಗರ ಉಪಾಧ್ಯಕ್ಷ ನಿಹಾದ ಅಹ್ಮದ ಗೋಡಿಹಾಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಕೆಂಗನಾಳ, ಡಾ. ಸಾಬೀರ ಮೋಮಿನ, ಡಾ.ಬಿ. ಎಂ. ಬಿರಾದಾರ, ಬಾಷಾ ಪಠಾಣ, ಅಮೀರ ಪಟೇಲ, ದಶರಥ ಪೋಳ, ಶಖೀಲ ಡಾಲಾಯತ, ನಬಿರಸೂಲ ಮಡಿಕೇಶ್ವರ, ಬುಡನ ಬೇಪಾರಿ, ರಮಜಾನ ಶೇಖ ಇನ್ನಿತರರು ಇದ್ದರು.