ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಪ್ ನಿಂದ ಮೈಸೂರಿನಲ್ಲಿ ಪ್ರತಿಭಟನೆ

22
Published on

ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷದಿಂದ ಶನಿವಾರ ನಗರದ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಜನರಿಗೆ ತೊಂದರೆ ಕೊಡುತ್ತಿವೆ. ಬಿಜೆಪಿ ತೆರಿಗೆ ಏರಿಕೆ ಮಾಡಿದರೆ ಕಾಂಗ್ರೆಸ್ ಬೆಲೆ ಏರಿಕೆ ಮಾಡುತ್ತಿದೆ ಎಂದು ದೂರಿದರು.

ಬಹುರಾಷ್ಟ್ರೀಯ ಕಂಪನಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹೊರಿಸುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಿಸಿದೆ. ಚಿನ್ನದ ಬೆಲೆಯಂತೂ ದುಪ್ಪಟ್ಟಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇದರ ಜತೆಗೆ ರಾಜ್ಯ ಸರ್ಕಾರ ಹಾಲು, ಮೊಸರು, ವಿದ್ಯುತ್, ನೀರು, ಮನೆ ಕಂದಾಯ ಹೆಚ್ಚಿಸಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ರಾಜ್ಯದಲ್ಲಿ ಮುಂದ್ರಾಕ ಶುಲ್ಕ ಶೇ.300ರಷ್ಟು ಏರಿಕೆಯಾಗಿದೆ. ಆಸ್ತಿಗಳ ಮೇಲಿನ ಮಾರ್ಗಸೂಚಿ ದರ, ವಾಹನಗಳ ನೋಂದಣಿ ಶುಲ್ಕ, ಮದ್ಯದ ಬೆಲೆ, ಪೆಟ್ರೋಲ್, ಡೀಸೆಲ್ ದುಬಾರಿಯಾಗಿದೆ ಎಂದು ಬೇಸರ ಹೊರ ಹಾಕಿದರು.

ಹಾಲಿನ ಬೆಲೆಯನ್ನು ಏರಿಕೆ ಮಾಡುತ್ತಲೇ ಇದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಬಿ-ಖಾತಾ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದಾರೆ. ಆಸ್ತಿ ತೆರಿಗೆ ದುಪ್ಪಟ್ಟಾಗಿದ್ದು, ಜನ ಸಾಮಾನ್ಯರು ಜೀವಿಸುವುದೇ ಕಷ್ಟವಾಗಿದೆ ಎಂದು ಕಿಡಿಕಾರಿದರು.

ಜನರಿಗೆ ತೆರಿಗೆ ಹೊರೆ ಹೊರಿಸಿ, ದಿನ ಬಳಕೆ ವಸ್ತುಗಳ ಬೆಲೆ ದುಬಾರಿಗೊಳಿಸಿ ಹಿಂಸಿಸುತ್ತಿರುವ ಸರ್ಕಾರ ಶಾಸಕರು ಮತ್ತು ಸಚಿವರ ವೇತನ, ಭತ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಎಂಬ ಸತ್ಯ ಮನವರಿಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಸಾಂವಿಧಾನಿಕ ಅಧಿಕಾರ ವಿಕೇಂದ್ರೀಕರಣ ಕಾಪಾಡಬೇಕು ಎಂದು ಒತ್ತಾಯಿಸಿದರು.

ಆಮ್ ಆದ್ಮಿ ಪಕ್ಷದ ನಗರಾಧ್ಯಕ್ಷ ಎಂ.ಸೋಮಶೇಖರ್, ಜಿಲ್ಲಾಧ್ಯಕ್ಷ ಎಲ್.ರಂಗಯ್ಯ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕುಲಕರ್ಣಿ, ನಂಜನಗೂಡು ತಾಲೂಕು ಅಧ್ಯಕ್ಷ ಟಿ.ಎಸ್.ವೀರೇಶ್‌ಕುಮಾರ್, ಕೆ.ಆರ್.ನಗರ ತಾಲೂಕು ಅಧ್ಯಕ್ಷ ಎಂ.ಜೆ.ನಾಗರಾಜೇಗೌಡ, ಎಚ್.ಡಿ ತಾಲೂಕು ಸಹಕ ಕಾರ್ಯದರ್ಶಿ ನಿಂಗಮ್ಮ, ಶಾಂತಮ್ಮ, ಯುವ ಘಟಕದ ಜಿಲ್ಲಾಧ್ಯಕ್ಷ ಅನಂತಸೂರ್ಯ, ಕಾರ್ಯಕರ್ತರಾದ ಮೊಹಮ್ಮದ್ ಜಾಫರ್, ಸತೀಶ್, ಜಯಶ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net