ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್‌, ವೇರ್‌ಹೌಸಿಂಗ್ ಸೊಸೈಟಿಯಲ್ಲಿ 80 ಕೋಟಿ ರೂ ಹಗರಣ: ಆಮ್ ಆದ್ಮಿ ಪಕ್ಷ ಆರೋಪ

AAP
AAP
Published on

ಬೆಂಗಳೂರು: ಆರೋಗ್ಯ ಸಚಿವ ಸುಧಾಕರ್ ಅವರಿಗೆ ಆಪ್ತವಾಗಿರುವ ಎರಡು ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್‌, ವೇರ್‌ಹೌಸಿಂಗ್ ಸೊಸೈಟಿಯ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಮರು ಟೆಂಡರ್ ಕರೆದು ಸರ್ಕಾರದ ಬೊಕ್ಕಸದಿಂದ 80 ಕೋಟಿಯಷ್ಟು ಹಣ ಲಪಟಾಯಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ 23 ರಂದು ರಾಜ್ಯದ ಆಯ್ದ ಸರ್ಕಾರಿ ಪ್ರಯೋಗಾಲಯಗಳಿಗೆ ಎರಡು ಬಗೆಯ ಬಯೋಕೆಮಿಸ್ಟ್ರಿ ಮತ್ತು ಎರಡು ಬಗೆಯ ಹೆಮಟಾಲಜಿ ಒಟ್ಟು ನಾಲ್ಕು ಬಗೆಯ ಸಾಧನಗಳನ್ನು ವಿತರಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿತ್ತು‌. ಈ ಪ್ರಕ್ರಿಯೆಯಲ್ಲಿ ಸಚಿವರ ಒತ್ತಡಕ್ಕೆ ಮಣಿದು "ಅಗಪೆ ಮತ್ತು ಸಿಸ್ ಮ್ಯಾಕ್ಸ್" ಎನ್ನುವ ಎರಡು ಕಂಪೆನಿಗಳಿಗೆ ಟೆಂಡರ್ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು ಸಹ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.

ಅಗಪೆ ಕಂಪೆನಿ ಬಯೋ ಕೆಮಿಸ್ಟ್ರಿ ಸಂಬಂಧಿತ ಎರಡು ಉಪಕರಣಗಳನ್ನು ಪೂರೈಸಿದರೆ ಸಿಸ್ ಮ್ಯಾಕ್ಸ್ ಹೆಮಟಾಲಜಿ (ರಕ್ತಶಾಸ್ತ್ರ) ಎರಡು ಉಪಕರಣಗಳನ್ನು ಪೂರೈಸಿದೆ. ಇದೇ ರೀತಿಯ ಇನ್ನೂ ಉತ್ತಮ ಗುಣಮಟ್ಟದ, ಮುಂದುವರೆದ ಉಪಕರಣಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪೂರೈಸುವುದಾಗಿ ತಿಳಿಸಿದ್ದ ಅನೇಕ ಕಂಪೆನಿಗಳ ಪ್ರಸ್ತಾವನೆಯನ್ನೇ ತಿರಸ್ಕರಿಸಿ ಅನುಭವವಿಲ್ಲದ ಎರಡು ಕಂಪೆನಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು "ಮುಂಬೈ ಮೂಲದ ಟ್ರಾನ್ಸಿಯಾ ಕಂಪೆನಿ" ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಬರೆದಿರುವ ದೂರಿನ ಪ್ರತಿಯಲ್ಲಿ ತಿಳಿಸಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದರು.

ಕೇರಳ ಮೂಲದ ಅಗಪೆ ಎನ್ನುವ ಕಂಪೆನಿ 2018-19 ರಲ್ಲಿ ರದ್ದುಗೊಂಡ ಟೆಂಡರ್ ಪ್ರಕ್ರಿಯೆಯಲ್ಲೂ ಭಾಗವಹಿಸಿತ್ತು. ಇದೇ ಕಂಪೆನಿ ಪ್ರಸ್ತುತ ಪೂರೈಸಿರುವ 1201 "ಸೆಮಿ ಆಟೋ ಬಯೋ ಕೆಮಿಸ್ಟ್ರಿ ಅನಲೈಜರ್" ಸಾಧನಕ್ಕೆ ₹ 59,900 ರೂಪಾಯಿ ನಮೂದಿಸಿತ್ತು, ಇದೇ ಸಾಧನವನ್ನು ಕೇರಳ ಆರೋಗ್ಯ ಇಲಾಖೆಗೆ, 55,460 ರೂಪಾಯಿಗೆ ಪೂರೈಸಿದೆ. ಪ್ರಸ್ತುತ ಅಗಪೆ ಕಂಪೆನಿಯಿಂದ ಹೆಚ್ಚುವರಿ ಹಣ ಕೊಟ್ಟು 86 ಸಾವಿರಕ್ಕೆ ಖರೀದಿಸಲಾಗಿದೆ. ಇದೇ ಕಂಪೆನಿಯಿಂದ 171 "ಫುಲ್ ಆಟೋಮೆಟೆಡ್ ಬಯೋಕೆಮಿಸ್ಟ್ರಿ ಅನಲೈಜರ್" ಸಾಧನವನ್ನು ₹ 9,90,000 ಕ್ಕೆ ಖರೀದಿಸಲಾಗಿದೆ. ಈ ಸಾಧನಕ್ಕೆ ಮೈಂಡ್ರೇ ಎನ್ನುವ ಕಂಪೆನಿ 5 ಲಕ್ಷ ರೂಪಾಯಿ ನಮೂದಿಸಿದ್ದರು ಏಕೆ ಟೆಂಡರ್ ರದ್ದುಗೊಳಿಸಲಾಯಿತು ಎನ್ನುವುದೇ ಯಕ್ಷ ಪ್ರಶ್ನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net