ಹಣವೇ ಚುನಾವಣೆಗೆ ಮಾನದಂಡವಲ್ಲ: ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿಕೆ

Aap
Published on

ಮಂಡ್ಯ: ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳು ಕೋಟ್ಯಂತರ ರೂ ವೆಚ್ಚ ಮಾಡುವುದು ಸಾಮಾನ್ಯವಾಗಿದ್ದರೂ ಹಣವೊಂದೇ ಗೆಲುವಿಗೆ ಮಾನದಂಡವಲ್ಲ ಎಂದು ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ನಟ ಡಾ.ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಾನು ಸೇರಿದಂತೆ ಸಾಕಷ್ಟು ಜನರು ಹಣ ಖರ್ಚು ಮಾಡದೆ ಗೆದ್ದ ಉದಾಹರಣೆಗಳಿವೆ. ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಮ್ಮ ಪಕ್ಷ ಹಣ ವೆಚ್ಚ ಮಾಡದೇ ಅಧಿಕಾರಕ್ಕೆ ಬಂದಿದೆ. ಯೋಗ್ಯರು ಚುನಾವಣೆಯಲ್ಲಿ ಗೆಲ್ಲಲು ಹಣದ ಅವಶ್ಯಕತೆಯಿಲ್ಲ. ಮುಂಬರುವ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪ್ರಾಮಾಣಿಕವಾಗಿ ಕೆಲಸ ಮಾಡಲು ಬಯಸುವ, ಭ್ರಷ್ಟಾಚಾರ ಆರೋಪವಿಲ್ಲ ಹಾಗೂ ಅವರ ವಿರುದ್ಧ ಯಾವುದೇ ಕ್ರಿಮಿನಲ್, ವಂಚನೆ ಅಥವಾ ಇತರ ಅಪರಾಧಿಕ ಪ್ರಕರಣಗಳು ಇಲ್ಲದವರಿಗೆ ಆಮ್ ಆದ್ಮಿ ಪಾರ್ಟಿಗೆ ಸೇರಲು ಅವಕಾಶವಿದೆ. ಹಾಗೆಯೇ ಪಕ್ಷದ ಕಾರ್ಯಕರ್ತರಿಗಷ್ಟೇ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ದೇಶದಲ್ಲಿ ಬದಲಾವಣೆಯ ಕಾಲ ಬಂದಿದೆ. ಜನರು ಬದಲಾವಣೆಗೆ ಅವಕಾಶ ಮಾಡಿಕೊಡಲಿದ್ದಾರೆ. ಈವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಭ್ರಷ್ಟಾಚಾರ ಮಾಡಿ ಆಡಳಿತ ನಡೆಸಿವೆ ಎಂದು ಟೀಕಿಸಿದರು.

ದೆಹಲಿ, ಪಂಜಾಬ್‌ನಲ್ಲಿ ಎಎಪಿ ಜನಪರ ಆಡಳಿತ ನೀಡುತ್ತಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್, 20 ಸಾವಿರ ಲೀಟರ್ ನೀರು ಹಾಗೂ ಉನ್ನತ ಶಿಕ್ಷಣವೂ ಉಚಿತವಾಗಿದೆ. ಸಾವಿರಾರು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ರೀತಿ ಉನ್ನತೀಕರಣಗೊಂಡಿವೆ. ಕರ್ನಾಟಕದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಇದೇ ಮಾದರಿಯ ಆಡಳಿತ ವ್ಯವಸ್ಥೆ ಜಾರಿಯಾಗಲಿದೆ ಎಂದ ಅವರು, ಎಎಪಿಗೆ ಸಾಕಷ್ಟು ಜನರು ಬೇರೆ ಪಕ್ಷಗಳ ನಾಯಕರು, ನಿವೃತ್ತ ಅಧಿಕಾರಿಗಳು ಸೇರುತ್ತಿದ್ದಾರೆ. ಆದರೆ, ನಮ್ಮದು ಪಕ್ಷಾಂತರಿಗಳ ಪಕ್ಷವಲ್ಲ. ಚುನಾವಣೆಗೂ ಮುನ್ನ ಯಾರು, ಯಾವುದೇ ಪಕ್ಷ ಸೇರಿದರೂ ಅದು ಪಕ್ಷಾಂತರವಲ್ಲ. ಗೆದ್ದ ಬಳಿಕ ಬೇರೆ ಪಕ್ಷ ಸೇರಿದರೆ ಅದು ಪಕ್ಷಾಂತರವಾಗುತ್ತದೆ. ನಾನು ಕೂಡ ಬೇರೆ ಪಕ್ಷಗಳಲ್ಲಿದ್ದೆ. ಆದರೆ, ಆ ಪಕ್ಷದ ಸಿದ್ದಾಂತಗಳಂತೆ ಅಲ್ಲಿನ ನಾಯಕರು ನಡೆದುಕೊಳ್ಳಲಿಲ್ಲ. ಆದ್ದರಿಂದ ನಾನು ಅವುಗಳನ್ನು ಬಿಟ್ಟು, ಈಗ ಎಎಪಿ ಸೇರಿದ್ದೇನೆ ಎಂದರು.

ಎಎಪಿ ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ ನೆಲ್ಲೂರ್, ರಾಜ್ಯ ಕಾರ್ಯದರ್ಶಿ ನಂಜಪ್ಪ ಕಾಳೇಗೌಡ, ಜಂಟಿ ಕಾರ್ಯದರ್ಶಿ ಬಿ.ಸಿ.ಮಹದೇವಸ್ವಾಮಿ ಬೆಂಡರವಾಡಿ, ಜಿಲ್ಲಾಧ್ಯಕ್ಷ ಶಿವಕುಮಾರ್, ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಬೂದನೂರು ಬೊಮ್ಮಯ್ಯ, ಮದ್ದೂರು ಕ್ಷೇತ್ರದ ಸ್ಪರ್ಧಾಕಾಂಕ್ಷಿ ಆನಂದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net