ಚಲಾವಣೆಯಲ್ಲಿ ಇಲ್ಲದವರಿಗೆ ಆಪ್ ಗಾಳ!

08Tmk_AAP_Ningappa
Published on

ವಿಜಯವಾಣಿ ಸುದ್ದಿಜಾಲ ತುಮಕೂರು

ರಾಜಕೀಯ ರಂಗದಲ್ಲಿ ಚಲಾವಣೆಯಲ್ಲಿ ಇಲ್ಲದವರಿಗೆ ಆಮ್ ಆದ್ಮಿ ಪಕ್ಷ ಗಾಳ ಹಾಕಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ತೆರೆಮರೆಗೆ ಸರಿದಿರುವ ಜೆಡಿಎಸ್ ಮಾಜಿ ಶಾಸಕ ಎಚ್.ನಿಂಗಪ್ಪ, ಬಿ.ನಂಜಾಮರಿಗೆ ಪಕ್ಷಕ್ಕೆ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

2004ರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಒಕ್ಕಲಿಗ ಸಮುದಾಯದ ಎಚ್.ನಿಂಗಪ್ಪ 10 ವರ್ಷ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದರು. ಕೆಜೆಪಿ, ಕಾಂಗ್ರೆಸ್ ಕದ ತಟ್ಟಿದ್ದ ನಿಂಗಪ್ಪ 2019ರಲ್ಲಿ ಮತ್ತೆ ಜೆಡಿಎಸ್‌ಗೆ ಮರಳಿದ್ದರು. ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಎಚ್.ಡಿ.ದೇವೇಗೌಡರ ಪರ ಕ್ಷೇತ್ರದಲ್ಲಿ ಸುತ್ತಾಡಿ, ಗೌಡರ ಸೋಲಿನ ಬಳಿಕ ಪಕ್ಷದಿಂದ ದೂರ ಸರಿದರು. ಸಂಘಟನೆ, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ನಿಂಗಪ್ಪ ಅವರ ಜತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ದೂರವಾಣಿ ಮೂಲಕ ಮೊದಲ ಸುತ್ತಿನ ಮಾತುಕತೆ ನಡೆಸಿ ಆಹ್ವಾನ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಆಪ್ ಪಕ್ಷದ ಡಾ.ವಿಶ್ವನಾಥ್, ಪ್ರಭುಸ್ವಾಮಿ, ಕೆ.ಆರ್.ಮಾರುತಿ, ಡಾ.ವಿಮಲ್ ಪಾಂಡೆ, ಗೋವರ್ಧನ ರಾಜು ಮತ್ತಿತರ ನಿಯೋಗವು ನಿಂಗಮ್ಮ ಅವರನ್ನು ತುಮಕೂರಿನ ನಿವಾಸದಲ್ಲಿ ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿಚಾರಗಳ ಚರ್ಚೆ ಮಾಡಿ ಪಕ್ಷಕ್ಕೆ ಖುದ್ದು ಆಹ್ವಾನ ನೀಡಿದೆ. ಈ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತಗಳ ಬಗ್ಗೆ ಒಲವು ತೋರಿದ ಎಚ್.ನಿಂಗಪ್ಪ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಲು 10 ದಿನ ಕಾಲಾವಕಾಶ ಕೋರಿದ್ದಾರೆ.

ಪಾಲಿಕೆ ವಿಪಕ್ಷ ನಾಯಕನಿಗೂ ಗಾಳ?: ತುಮಕೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜೆ.ಕುಮಾರ್‌ಗೂ ಆಮ್ ಆದ್ಮಿ ನಿಯೋಗವು ಆಹ್ವಾನ ನೀಡಿದೆ. ಆದರೆ, ತಾವು ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆ ವಿಚಾರವನ್ನು ಕುಮಾರ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net