

ಮಡಿಕೇರಿ: ಲೋಕಸಭಾ ಚುನಾವಣೆಯ ಸಂದರ್ಭ ನಿರಂತರವಾಗಿ ಕೊಡಗು ಜಿಲ್ಲೆಗೆ ಅನ್ಯಾಯವಾಗುತ್ತಿರುವುದರಿಂದ ಕೊಡಗಿನವರಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ, ಕೊಡಗು ಜಿಲ್ಲೆ ಕರ್ನಾಟಕದ ಗರ್ವವಾಗಿದ್ದು, ಶೌರ್ಯ, ಶಿಸ್ತಿನ ಜೀವನಶೈಲಿ ಮತ್ತು ದೇಶಸೇವೆಯ ಪರಂಪರೆಯಿಂದ ಪ್ರಸಿದ್ಧವಾಗಿದೆ. ಭಾರತೀಯ ಸೇನೆ, ಕ್ರೀಡಾರಂಗ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಕೊಡಗಿನ ಅನೇಕರು ತೊಡಗಿಸಿಕೊಂಡು ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದ್ದಾರೆ. ಈ ರೀತಿಯ ಹೆಗ್ಗಳಿಕೆಯನ್ನು ಹೊಂದಿರುವ ಕೊಡಗು ಜಿಲ್ಲೆಗೆ ಪ್ರತಿ ಲೋಕಸಭಾ ಚುನಾವಣೆಯಲ್ಲಿ ಅನ್ಯಾಯವಾಗುತ್ತಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೊಡಗಿನ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡದೆ ಕಡೆಗಣಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯ ಅಭ್ಯರ್ಥಿಗಳು ಚುನಾಯಿತರಾಗಿಲ್ಲ. ಈ ಕಾರಣದಿಂದ ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಧ್ವನಿ ಇಲ್ಲದಂತಾಗಿದೆ ಮತ್ತು ಸ್ಪಂದನೆ ಮರೀಚಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೊಡಗು ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಯುವಜನತೆ ಉದ್ಯೋಗ ಮತ್ತು ಸ್ವಯಂ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಪ್ರಮುಖ ಖಾತೆಗಳ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನ ಮಾಡುತ್ತಿಲ್ಲ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಕೊಡಗನ್ನು ಮತಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದು, ಸ್ಥಳೀಯರಿಗೆ ರಾಜಕೀಯ ಅವಕಾಶವನ್ನು ನೀಡುತ್ತಿಲ್ಲವೆಂದು ಟೀಕಿಸಿದ್ದಾರೆ.