ನೀಟ್ ಪರೀಕ್ಷಾ ಅಕ್ರಮ ತನಿಖೆಗೆ ಎಎಪಿ ಆಗ್ರಹ

Neet Exam
Published on

ಮೈಸೂರು: ವೈದ್ಯಕೀಯ ಕೋರ್ಸ್‌ಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)-2024ರಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಯುವಘಟಕದ ಉಪಾಧ್ಯಕ್ಷೆ ಧರ್ಮಶ್ರೀ ಒತ್ತಾಯಿಸಿದರು.


ಈ ಸಲ ನೀಟ್ ಪರೀಕ್ಷೆ ಬರೆದ 67 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಗಳಿಸಿದ್ದು, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಇದು ಅನೇಕ ಅನುಮಾನ ಮೂಡಿಸಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಪರೀಕ್ಷಾ ಅಕ್ರಮ ನಡೆದಿದೆ ಎಂಬ ಆರೋಪಗಳು ವಿದ್ಯಾರ್ಥಿ ವಲಯದಲ್ಲಿ ಕೇಳಿ ಬರುತ್ತಿವೆ. ಆದ್ದರಿಂದ ಈ ಬಗ್ಗೆ ಕೇಂದ್ರ ಸರ್ಕಾರವು ಪಾರದರ್ಶಕ ತನಿಖೆಗೆ ಆದೇಶಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.


ಈ ಅಕ್ರಮದಿಂದ ಲಕ್ಷಾಂತರ ವೈದ್ಯಕೀಯ ವ್ಯಾಸಂಗದ ಕನಸು ಭಗ್ನವಾಗಿದೆ. ಇವರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ, ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಒತ್ತಾಯಿಸಿದರು.


ನೀಟ್ ಪರೀಕ್ಷೆಯಿಂದ ರಾಜ್ಯದ ವಿದ್ಯಾರ್ಥಿಗಳು ಸಾಕಷ್ಟು ನಷ್ಟ ಅನುಭವಿಸಲಿದ್ದು, ವೈದ್ಯಕೀಯ ಕೋರ್ಸ್ ಸೀಟು ಗಿಟ್ಟಿಸಿಕೊಳ್ಳುವುದು ಕಷ್ಟಕರವಾಗಿದೆ. ಆದ್ದರಿಂದ ನೀಟ್ ಬದಲು ಸಿಇಟಿ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಹೇಳಿದರು. ಪಕ್ಷದ ಮುಖಂಡರಾದ ಕಿರಣ್ ಕಲ್ಯಾಣಿ, ಜಯಶ್ರೀ, ಶಹಬುರ್ ರೆಹಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net