

ಬಳ್ಳಾರಿ: ನಗರದ 24ನೇ ವಾರ್ಡ್‌ನ ಗಿರಿನಗರದಲ್ಲಿ ಕಾಲುವೆ ಒತ್ತುವರಿಯಾಗಿದೆ ಎಂದು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದು, ಅಲ್ಲಿನ ನಿವಾಸಿಗಳು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಮನೆಗಳನ್ನು ತೆರವು ಮಾಡಲು ಸ್ಥಳಿಯರಿಗೆ ಐದು ದಿನ ಕಾಲವಕಾಶ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಬಳ್ಳಾರಿ ಜಿಲ್ಲಾಧ್ಯಕ್ಷ ಮಂಜುನಾಥ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಮಂಜುನಾಥ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಸ್ಥಳೀಯರ ಕಷ್ಟಗಳನ್ನು ಆಲಿಸಿ ಮಾತನಾಡಿದರು.
ತೆರವು ಕಾರ್ಯಾಚರಣೆಗೆ ಮೊದಲೇ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ, ಆದರೆ,ಇಲ್ಲಿನ ಮುಗ್ದ ಜನಗಳಿಗೆ ಕಾನೂನಿನ ಅರಿವುವಿಲ್ಲ ಏಕಾಏಕಿ ಈಗ ಅಧಿಕಾರಿಗಳು ತೆರವುಗೊಳಿಸಲು ಬಂದಿದ್ದು, ಜನ ಬೀದಿಗೆ ಬೀಳುವ ಭಯದಲ್ಲಿದ್ದಾರೆ, ಅವರು ಜಾಗವನ್ನು ತೆರವು ಮಾಡಲು ಸಮಯ ನೀಡಿ ಎಂದು ಹೇಳಿದರು.
ಜನರು ಜಾಗವನ್ನು ಖಾಲಿ ಮಾಡಲ್ಲ ಎಂದು ಹೇಳುತ್ತಿಲ್ಲ, ಆದರೆ ಅವರಿಗೆ ಯಾವ ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡುತ್ತಿದ್ದಾರೆ. ಶಾಸಕರು ಜಾಗ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ, ಅವರು ಸದ್ಯ ಊರಲ್ಲಿಲ್ಲ, ಆದ್ದರಿಂದ ಇವರಿಗೆ ಸಮಸ್ಯೆಯಾಗಿದೆ. ಜಿಲ್ಲಾಡಳಿತ ಕೂಡಲೇ ಮನೆ ಕಳೆದುಕೊಳ್ಳುತ್ತಿರುವ ಬಡಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸರ್ಕಾರ ಮತ್ತು ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.