

ಹಾರೋಹಳ್ಳಿ: ಕನಕಪುರ ತಾಲೂಕು ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸಾಕಾನೆ ತುಳಿದು ಪ್ರಧಾನ ಮಾವುತ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಕೇರಳ ಮೂಲದ ಪಾಲಕ್ಕಾಡ್‌ನ ರಾಜೇಶ್ (34) ಮೃತ. 8 ವರ್ಷಗಳಿಂದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ.
ರಾಜೇಶ್ ಮತ್ತು 5 ಜನರ ತಂಡ ಗಂಡಾನೆ ಮಹೇಶ್ವರನ್ ಮತ್ತು ಹೆಣ್ಣಾನೆಯನ್ನು ನೋಡಿಕೊಳ್ಳುತ್ತಿದ್ದರು. ಇದರ ಮೇಲ್ವಿಚಾರಣೆಯನ್ನು ರಾಜೇಶ್ ನೋಡಿಕೊಳ್ಳುತ್ತಿದ್ದರು. ಸೋಮವಾರ ಬೆಳಗ್ಗೆ ಎಂದಿನಂತೆ ಆನೆ ಲಾಯ ಸ್ವಚ್ಛಗೊಳಿಸಲು ಹೋಗಿದ್ದಾರೆ. ಎಲ್ಲರೂ ಲಾಯದಿಂದ ಹೊರಬಂದಿದ್ದಾರೆ. ಆದರೆ, ರಾಜೇಶ್ ಮಾತ್ರ ಆನೆಯ ಜತೆ ಕುಳಿತಿದ್ದರು. ಈ ವೇಳೆ ಮದವೇರಿದ ಆನೆ ಆತನ ಹೊಟ್ಟೆಯನ್ನು ತುಳಿದಿದೆ. ಚೀರಾಟದ ಧ್ವನಿ ಕೇಳಿದ ಇತರ ಮಾವುತರು ಆನೆಯನ್ನು ಓಡಿಸಿ ರಾಜೇಶ್‌ನನ್ನು ಎಳೆದುಕೊಂಡಿದ್ದಾರೆ. ಅಷ್ಟರೊಳಗೆ ರಾಜೇಶ್ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕಗ್ಗಲಿಪುರ ಠಾಣೆ ಎಸ್‌ಐ ವೆಂಕಟೇಶ್ ಮತ್ತು ಅರಣ್ಯ ಇಲಾಖೆ ಆರ್‌ಎಫ್ಓ ಗೋಪಾಲ್ ಎಆರ್‌ಎಫ್ಓ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಪಾಲ್ ಮಾತನಾಡಿ, ಸಾಕಾನೆಯಾಗಿರುವುದರಿಂದ ಸರ್ಕಾರದಿಂದ ಪರಿಹಾರ ಸಿಗುವುದಿಲ್ಲ, ಆನೆಗೆ ವಿಮೆ ಮಾಡಿಸಿರುವುದರಿಂದ ಮೂರನೇ ವ್ಯಕ್ತಿಗೆ ಪರಿಹಾರ ಬರುತ್ತದೆ. ಇದು ಆತನ ಕುಟುಂಬಕ್ಕೆ ಸೇರುತ್ತದೆ ಎಂದರು.
ಮೃತನಿಗೆ ಆಶ್ರಮದಿಂದ ಸಿಗಬೇಕಾದ ಪರಿಹಾರ ನೀಡಲಾಗುತ್ತದೆ. ಸರ್ಕಾರದಿಂದ ಎಷ್ಟು ಹಣ ಬರುತ್ತದೋ ಅಷ್ಟು ಹಣವನ್ನು ಮೃತರ ಕುಟುಂಬಕ್ಕೆ ಕೊಡಲಾಗುವುದು ಮತ್ತು ವಿಮೆಯ ಹಣವನ್ನೂ ನೀಡುತ್ತೇವೆ. -ನಿಖಿಲೇಶ್ ಆರ್ಟ್ ಆಫ್ ಲಿವಿಂಗ್ ಆಶ್ರಮದ ಆಡಳಿತಾಧಿಕಾರಿ